ಮಕ್ಕಳ ಭಿಕ್ಷಾಟನೆ ನಿಯಂತ್ರಣಕ್ಕೆ ಕ್ರಮ: ಮಂಗಳೂರು ತಹಶೀಲ್ದಾರ್
ಮಂಗಳೂರು, ಜ.20: ಕೆಲವೊಂದು ಕಡೆ ಗೂಡಂಗಡಿಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇಂತಹ ಸಂದರ್ಭ ನೇರವಾಗಿ ಪೊಲೀಸ್ ಇಲಾಖೆಗೆ ದೂರನ್ನು ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಸೂಚಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಯೋಜನೆಗಳ ಅನುಷ್ಠಾನ ಬಗ್ಗೆ ತಾಲೂಕು ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಮಕ್ಕಳ ಭಿಕ್ಷಾಟನೆ ಸಮಸ್ಯೆ ಜಾಸ್ತಿಯಾಗಿದೆ. ತುಳುನಾಡು, ಆಂಧ್ರಪ್ರದೇಶ ಮತ್ತು ಕೇರಳದ ಮಕ್ಕಳು ಬಂದು ಭಿಕ್ಷಾಟನೆಯಲ್ಲಿ ತೊಡಗುತ್ತಾರೆ. ಈ ನಿಟ್ಟಿನಲ್ಲಿ ಮಹಾನಗರಪಾಲಿಕೆಯೊಂದಿಗೆ ಸಭೆ ನಡೆಸಲು ತಹಶೀಲ್ದಾರ್ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಪಂಗಳಲ್ಲಿ ತ್ರೈಮಾಸಿಕ ಮಕ್ಕಳ ಗ್ರಾಮಸಭೆ ಮಾಡಬೇಕು. ಮಕ್ಕಳೇ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಪರಿಹಾರ ಮಾಡುವಂತಹ ಕಾರ್ಯ ಮಾಡಬಹುದು. ಮುಂದಿನ ದಿನಗಳಲ್ಲಿ ಶಿಬಿರಗಳನ್ನು ಮಾಡುವುದಾಗಿ ತಹಶೀಲ್ದಾರ್ ಹೇಳಿದರು.
ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಅಲೆಮಾರಿ ಕಾರ್ಮಿಕರು ಸವಾಲಾಗಿದ್ದಾರೆ. ಉತ್ತರ ಕರ್ನಾಟಕದಿಂದ ಕೆಲಸಕ್ಕಾಗಿ ಬರುವವರ ಬಗ್ಗೆ ಮಾಹಿತಿ ಕಲೆ ಹಾಕುವುದು ಸಮಸ್ಯೆಯಾಗಿದೆ. ಸಾಮೂಹಿಕ ವಿವಾಹಗಳ ಮೇಲೆ ನಿಗಾ ವಹಿಸಲಾಗಿದ್ದು, ಗ್ರಾಮಕರಣಿಕರಿಗೆ ಈಗಾಗಲೇ ವಿವಾಹ ನೋಂದಣಿಯ ಕುರಿತು ಸುತ್ತೋಲೆಯನ್ನು ಕಳುಹಿಸಿ ಸೂಕ್ತ ತರಬೇತಿ ನೀಡಲಾಗಿದೆ ಎಂದು ಹೇಳಿದರು.