ಫಲ್ಗುಣಿ ನದಿ ರಕ್ಷಣೆಗೆ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕರೆ
ಮಂಗಳೂರು, ಜ. 20: ಕರಾವಳಿಯ ಜೀವನದಿಗಳಲ್ಲಿ ಒಂದಾಗಿರುವ ಫಲ್ಗುಣಿ ನದಿ ಮತ್ತೆ ಸಂಕಷ್ಟದಲ್ಲಿದೆ. ಫಲ್ಗುಣಿ ನದಿಯನ್ನು ಸೇರುವ ತೋಕೂರು ಹಳ್ಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ಕೊಳೆತು ನಾರುತ್ತಿದೆ. ಎಂಎಸ್‍ಇಝೆಡ್‍ನ ಕಾರಿಡಾರ್ ರಸ್ತೆಯ (ತೋಕೂರು ರಸ್ತೆ) ಬಲಬದಿಯ ತೋಕೂರು ಹಳ್ಳವು ಕಾರ್ಖಾನೆಗಳ ತ್ಯಾಜ್ಯದಿಂದ ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ರಸ್ತೆಯವರೆಗೂ ದುರ್ನಾತ ಹಬ್ಬಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ ಮರವೂರು, ಬಜಪೆ ಭಾಗದಲ್ಲಿ ಕೊಳೆತು ನಾರುವ ಮೂಲಕ ಅಪಾಯದತ್ತ ಜನರ ಗಮನ ಸೆಳೆದಿತ್ತು. ಈ ಬಾರಿ ಬೇಸಿಗೆಗೆ ಮುನ್ನವೇ ಫಲ್ಗುಣಿ ನದಿಯ ಮತ್ತೊಂದು ಭಾಗವಾದ ತೋಕೂರು ಬಳಿ ಮಾಲಿನ್ಯ ಕಾಣಿಸಿಕೊಂಡಿದೆ ಎಂದು ಹೇಳಿದರು.
ಫಲ್ಗುಣಿ ನದಿ ಮೂಲವಾಗಿದ್ದ ಈ ತೋಕೂರು ಪ್ರದೇಶದ ಭೂಮಿಯನ್ನು ಎಸ್‍ಇಝೆಡ್ ಕಾರಿಡಾರ್ ರಸ್ತೆಗಾಗಿ ಭೂಮಿ ಸಮತಟ್ಟು ಮಾಡುವಾಗ ಸಹಜ ಹರಿವಿನ ಈ ನೀರಿನ ಮೂಲದ ಶೇ. 50ರಷ್ಟು ಭಾಗಮಣ್ಣು ಹಾಕಿ ಮುಚ್ಚಲಾಗಿದೆ. ಇದೀಗ ಬೃಹತ್ ಕಾರ್ಖಾನೆಗಳ ಸಮೀಪದ ತೋಕೂರು ಹಳ್ಳ ಕೊಳೆತು ನಾರುತ್ತಿದೆ. ಅಲ್ಲಿಂದ ಅರ್ಧ ಕಿ ಮೀ ದೂರ ಹರಿದು ನದಿಯನ್ನು ಕೊಳೆತ ನೀರಿನೊಂದಿಗೆ ಪಲ್ಗುಣಿಯನ್ನುಸೇರುತ್ತದೆ. ಜೀವ ನದಿ ಪಲ್ಗುಣಿ ಕಣ್ಣು ಮುಂದೆ ಸಾಯುತ್ತಿದೆ. ಆದರೆ ಯಾರೂ ಇತ್ತ ಗಮನ ಹರಿಸುತ್ತಿಲ್ಲ. ಈಗಾಗಲೇ ಈ ಬಗ್ಗೆ ಪರಿಸರ ಮಾಲಿನ್ಯ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದರು.
ಫಲ್ಗುಣಿ ನಮ್ಮ ಜೀವನದಿಗಳಲ್ಲಿ ಒಂದು. ಅದನ್ನು ಉಳಿಸಬೇಕಾಗಿರುವುದು ನಮ್ಮೆಲ್ಲ ಕರ್ತವ್ಯ. ಮಂಗಳೂರಿನ ಜನಸಾಮಾನ್ಯರನ್ನು ಧರ್ಮದ ಹೆಸರಲ್ಲಿ ಒಡೆಯಲಾಗುತ್ತಿದೆ. ಜೀವನದಿಯ ರಕ್ಷಣೆಗಿಂತ ಮಿಗಿಲಾದ ಧರ್ಮವಿಲ್ಲ. ಈ ಕಾರಣದಿಂದ ನಾಗರಿಕರೆಲ್ಲರೂ ಮತಭೇದ ಮರೆತು ‘ಫಲ್ಗುಣಿ ನದಿ ಉಳಿಸಿ’ ಅಭಿಯಾನಕ್ಕೆ ಕೈಜೋಡಿಸಬೇಕು. ಜಿಲ್ಲಾಡಳಿತ ಈಗಾಗಲಾದರೂ ಎಚ್ಚೆತ್ತು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.