ಸೌಹಾರ್ದಕ್ಕಾಗಿ ಕರ್ನಾಟಕ: ಮಾನವ ಸರಪಳಿ ಯಶಸ್ವಿಗೊಳಿಸಲು ಸಿದ್ಧತಾ ಸಭೆ

Update: 2018-01-20 17:11 GMT

ಮಂಗಳೂರು, ಜ. 20: ಜನವರಿ 30 ರಂದು ರಾಜ್ಯಾದ್ಯಂತ ಕೋಮುವಾದಕ್ಕೆದುರಾಗಿ ನಡೆಯಲಿರುವ "ಮಾನವ ಸರಪಳಿ”ಯನ್ನು ಮಂಗಳೂರು ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಯಶಸ್ಸುಗೊಳಿಸುವ ಕುರಿತು ಸಮಾನ ಮನಸ್ಕ ಜಾತ್ಯಾತೀತ ಪಕ್ಷ, ಸಂಘಟನೆಗಳ ಸಿದ್ದತಾ ಸಭೆ ಶನಿವಾರ  ನಡೆಯಿತು.

1948ರ ಜನವರಿ 30ರಂದು ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಗುಂಡಿಟ್ಟು ಕೊಂದನು. ಈ ಮೂಲಕ ಮಹಾತ್ಮಾ ಗಾಂಧೀಜಿ, ಭಾರತದಲ್ಲಿ ಕೋಮುವಾದಕ್ಕೆ ಬಲಿಯಾದ ಮೊದಲ ಹುತಾತ್ಮ ಎನಿಸಿದರು. ಈ ಹಿನ್ನೆಲೆಯಲ್ಲಿ, ಕೋಮುವಾದಕ್ಕೆ ಎದುರಾಗಿ ನಾಡಿನಾದ್ಯಂತ ಸೌಹಾರ್ದತೆಯನ್ನು ಸಾರಲು ‘ಸೌಹಾರ್ದಕ್ಕಾಗಿ ಕರ್ನಾಟಕ’ ವತಿಯಿಂದ ಜನವರಿ 30 ರಂದು ಬಾಂಧವ್ಯ ಬೆಸೆಯುವ ‘ಮಾನವ ಸರಪಳಿ’ಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂಬಂಧ ನಡೆದ ಸಭೆಯಲ್ಲಿ ಮಂಗಳೂರಿನ ಸಮಾಜಿಕ ಕ್ಷೇತ್ರದ ಪ್ರಮುಖರು ಹಾಗೂ ಹೋರಾಟಗಾರರು ಉಪಸ್ಥಿತರಿದ್ದರು. 

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ಮಾನವ ಬಂಧುತ್ವ ವೇದಿಕೆಯ ವಿಲ್ಫ್ರೆಡ್ ಡಿಸೋಜ, ಸಿಪಿಐಎಮ್ ನ ವಸಂತ ಆಚಾರಿ, ಸಿಪಿಐನ ಕರುಣಾಕರ್, ದಲಿತ ಸಂಘರ್ಷ ಸಮಿತಿಯ ದೇವದಾಸ್ ಹಾಗೂ ರಘು ಎಕ್ಕಾರು, ಡಿವೈಎಫ್ಐನ ಬಿಕೆ ಇಮ್ತಿಯಾಜ್ ಹಾಗೂ ಸಂತೋಷ್ ಬಜಾಲ್, ರೈತ ಸಂಘದ ಯಾದವ ಶೆಟ್ಟಿ, ಪ್ರೊ.ಡಾ.ರಾಜೇಂದ್ರ ಉಡುಪ, ಹೋರಾಟಗಾರ್ತಿ ವಿದ್ಯಾ ದಿನಕರ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಹಿರಿಯ ವಕೀಲ ಯಶವಂತ ಮರೋಳಿ, ಬಿಎ ಹನೀಫ್, ರಾಮಚಂದ್ರ ಬಬ್ಬುಕಟ್ಟೆ, ಪ್ರಗತಿಪರ ಚಿಂತಕರ ವೇದಿಕೆಯ ಶಾಮಸುಂದರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News