ಮೇಲ್ವರ್ಗದ ಶೋಷಣೆ ವಿರುದ್ಧ ಧ್ವನಿ ಎತ್ತಿದ ಅಂಬಿಗರ ಚೌಡಯ್ಯ: ಸಚಿವ ಪ್ರಮೋದ್

Update: 2018-01-21 10:37 GMT

ಉಡುಪಿ ಜ.21: ಮೇಲ್ವರ್ಗದವರಿಂದ ಶೋಷಣೆಗೊಳಗಾದ ಅಂಬಿಗರ ಚೌಡಯ್ಯ ಶೋಷಿತರ ಪರವಾಗಿ ಧ್ವನಿ ಎತ್ತಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಬನ್ನಂಜೆಯ ಸಮಾಜ ಕಲ್ಯಾಣ ಇಲಾಖಾ ವಸತಿ ನಿಲಯದಲ್ಲಿ ಆಯೋಜಿಸಲಾದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬಸವಣ್ಣ ಮತ್ತು ಅಂಬಿಗರ ಚೌಡಯ್ಯ ಸಮಕಾಲೀನರಾಗಿದ್ದು, ಮೇಲ್ವರ್ಗ ದಲ್ಲಿ ಜನಿಸಿದ ಬಸವಣ್ಣ ತಮ್ಮ ವರ್ಗದವರಿಂದಲೇ ನಡೆಯುತ್ತಿದ್ದ ಶೋಷಣೆಯ ವಿರುದ್ದ ಸಿಡಿದೆದ್ದರೆ, ಶೋಷಿತ ಜನಾಂಗದಲ್ಲಿ ಜನಿಸಿದ ಅಂಬಿಗರ ಚೌಡಯ್ಯ ಮೇಲ್ವರ್ಗದ ಶೋಷಣೆ ವಿರುದ್ಧ ದನಿ ಎತ್ತಿದರು. ಅರಿವಿನಿಂದ ಶೋಷಣೆಗೆ ಒಳಗಾಗಲು ಸಾಧ್ಯವಿಲ್ಲ ಎಂಬುದನ್ನು ಅರಿತ ಚೌಡಯ್ಯ, ವೌಢ್ಯತೆಯ ವಿರುದ್ದ ಅತ್ಯಂತ ತೀಕ್ಷ್ಣ ವಚನಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸಿದರು ಎಂದರು.

 ಚೌಡಯ್ಯರ ಮಾರ್ಗದರ್ಶನ ಹಾದಿಯಲ್ಲೇ ನಡೆಯುವ ಉದ್ದೇಶದಿಂದ ಸರಕಾರ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಆರಂಭಿಸಿದ್ದು, ಈ ನಿಗಮದ ಮೂಲಕ ಮೀನುಗಾರರ ಅಭಿವೃದ್ದಿಗೆ ನೆರವು ನೀಡಲಾಗುತ್ತಿದೆ. ಅಂಬಿಗರ ಚೌಡಯ್ಯರ ಆದರ್ಶ ಹಾಗೂ ಸಂದೇಶಗಳು ಇಂದಿಗೂ ಪ್ರಸ್ತುತ ಎಂದು ಪ್ರಮೋದ್ ಮಧ್ವರಾಜ್ ತಿಳಿಸಿದರು. ಅಂಬಿಗರ ಚೌಡಯ್ಯ ಕುರಿತು ವಿಶೇಷ ಉಪನ್ಯಾಸ ನೀಡಿದ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಮಾ ಎಸ್. ಅಂಬಿಗರ ಸಮುದಾಯದಲ್ಲಿ ಜನಿಸಿದ ಚೌಡಯ್ಯ, ಬಸವಣ್ಣನ ಸಮಕಾಲೀನವರಾಗಿದ್ದು, 180ರಿಂದ 300 ವಚನಗಳನ್ನು ರಚಿಸಿದ್ದಾರೆ. ತಮ್ಮ ವಚನಗಳಲ್ಲಿ ಜಾತಿ ವ್ಯವಸ್ಥೆ, ವೌಢ್ಯತೆ ವಿರುದ್ಧ ದನಿ ಎತ್ತಿದ್ದರು. ಅನ್ಯಾಯ ಶೋಷಣೆಯ ವಿರುದ್ಧ ತಮ್ಮ ವಚನಗಳಲ್ಲಿ ಅತ್ಯಂತ ತೀಕ್ಷ್ಣ ಬಂಡಾಯ ಭಾಷೆ ಬಳಸಿರುವ ಇವರು, ದಿಟ್ಟ ಅಂಬಿಗರ ಚೌಡಯ್ಯ ಎಂದು ಹೆಸರಾದವರು ಎಂದರು.

 ದೈನಂದಿನ ಬದುಕಿನಲ್ಲಿ ಆಧ್ಯಾತ್ಮಿಕ ಆಚರಣೆ, ಲಿಂಗ ಸಮಾನತೆ ಹಾಗೂ ಅರಿವು ಮೂಡಿಸುವ ಬಗ್ಗೆ ವಚನ ರಚಿಸಿರುವ ಚೌಡಯ್ಯ, ಪ್ರತಿಯೊಬ್ಬರೂ ತನ್ನನ್ನು ತಾನು ಅರಿತರೇ ಆತ್ಮಜ್ಞಾನ ಮತ್ತು ದೈವತ್ವ ಕಾಣಲು ಸಾಧ್ಯ ಎಂದು ತಿಳಿಸಿದ್ದರು. ಪ್ರಸ್ತುತ ಸಮಾಜದ ತಲ್ಲಣಗಳಿಗೆ ಇವರ ವಚನಗಳು ಉತ್ತರ ನೀಡಲಿದ್ದು, ಈ ವಚನಗಳನ್ನು ಅರ್ಥ ಮಾಡಿಕೊಂಡು ಅದೇ ದಾರಿಯಲ್ಲಿ ಎಲ್ಲರೂ ಸಾಗಬೇಕಾಗಿದೆ ಎಂದು ಹೇಳಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ತಾಪಂ ಅಧ್ಯಕ್ಷೆ ನಳನಿ ಪ್ರದೀಪ್ ರಾವ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ ಕಾಪಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಸಮಾಜ ಕಲ್ಯಾಣ ಇಲಾಖೆಯ ಭಾಸ್ಕರ್ ಅಂಚನ್ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ದೇವದಾಸ ಪೈ ಸ್ವಾಗತಿಸಿದರು. ವಿದ್ಯಾರ್ಥಿ ನಿಲಯದ ವಾರ್ಡೆನ್ ಲಲಿತಾ ಭಟ್ ವಂದಿಸಿದರು.

ಇಲಾಖೆಯ ತಾಂತ್ರಿಕ ಸಹಾಯಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಕಲಾವತಿ ದಯಾನಂದ ಮತ್ತು ಬಳಗದವರಿಂದ ವಚನ ಗಾಯನ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News