ರಾಜ್ಯದ 30 ಜಿಲ್ಲಾಸ್ಪತ್ರೆಗಳಲ್ಲಿ ನೇತ್ರ ಸಂಗ್ರಹಣಾ ಕೇಂದ್ರ: ರಾಜೀವ ಶೆಟ್ಟಿ

Update: 2018-01-21 12:09 GMT

ಉಡುಪಿ, ಜ. 21: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯು ರಾಜ್ಯದ ಎಲ್ಲಾ 30 ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ನೇತ್ರ ಸಂಗ್ರಹಣಾ ಕೇಂದ್ರ, ನೇತ್ರ ಬ್ಯಾಂಕ್ ಮತ್ತು ಅಂಧತ್ವ ನಿವಾರಣಾ ಉಪಕರಣಗಳ ಕೇಂದ್ರವನ್ನು ಸ್ಥಾಪಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ರೆಡ್‌ಕ್ರಾಸ್ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲ ಚೇತನರ ಸಬಲೀಕರಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರವಿವಾರ ಉಡುಪಿ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಲಾದ ಅರಿವಿನ ಸಿಂಚನ ಯೋಜನೆಯಡಿಯಲ್ಲಿ ಬ್ರೈಲ್ ತರಬೇತಿ ಮತ್ತು ಚಲನವಲನ ಗಳ ತರಬೇತಿ ಉದ್ಘಾಟನೆ ಹಾಗೂ ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಲಾಗಿದ್ದು, ಐ ಬ್ಯಾಂಕ್‌ಗೆ ಬೇಕಾಗಿರುವ ಅಗತ್ಯ ರೆಫ್ರಿಜರೇಟರ್ ಹಾಗೂ ಮೈಕ್ರೋಸಾಫ್ಟ್‌ನ್ನು ಒದಗಿಸುವ ಕೆಲಸ ರೆಡ್‌ಕ್ರಾಸ್ ಮಾಡಲಿದೆ ಎಂದರು.

ದೇಶದಲ್ಲಿ ಪ್ರತಿದಿನ 67400 ಮಕ್ಕಳು ಜನಿಸಿದರೆ, 51000 ಮಂದಿ ವಿವಿಧ ಕಾರಣಗಳಿಂದ ಮರಣ ಹೊಂದುತ್ತಿದ್ದಾರೆ. ದೇಶದಲ್ಲಿ ಪ್ರಸ್ತುತ 38 ಲಕ್ಷ ಮಂದಿ ಅಂಧತ್ವದಿಂದ ಬಳಲುತ್ತಿದ್ದು, ಅವರಿಗೆ ಕಣ್ಣುಗಳ ಅವಶ್ಯಕತೆ ಇದೆ. ಮರಣ ಹೊಂದಿದ ವ್ಯಕ್ತಿಯ ಕಣ್ಣುಗಳನ್ನು 4-6 ಗಂಟೆಯ ಒಳಗೆ ದಾನ ಮಾಡಬಹು ದಾಗಿದೆ. ಆದರೆ ನಮ್ಮಲ್ಲಿ ನೇತ್ರದಾನಕ್ಕೆ ಹೆಸರು ನೊಂದಾಯಿದ್ದರೂ ಕೂಡ ಮೃತರ ಮನೆಯವರು ಮಾಹಿತಿ ನೀಡದ ಕಾರಣ ಕಣ್ಣುಗಳ ಸಂಗ್ರಹ ಸಾಧ್ಯ ವಾಗುತ್ತಿಲ್ಲ ಎಂದು ಅವರು ಹೇಳಿದರು.

ಉಡುಪಿಯ ಪ್ರಸಾದ್ ನೇತ್ರಾಲಯದಲ್ಲಿ ರೆಡ್‌ಕ್ರಾಸ್‌ನಿಂದ ಈಗಾಗಲೇ ನೇತ್ರ ಬ್ಯಾಂಕ್ ಸ್ಥಾಪಿಸಲಾಗಿದ್ದು, ಇಲ್ಲಿ 3685 ಮಂದಿ ಹೆಸರು ನೊಂದಾಯಿಸಿ ದ್ದಾರೆ. ರೆಡ್‌ಕ್ರಾಸ್ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ ರಾಜ್ಯದ 6-14 ವರ್ಷದೊಳಗಿನ 8663 ಮಕ್ಕಳಿಗೆ 18 ಕೋಟಿ ವೆಚ್ಚದಲ್ಲಿ ಶ್ರವಣ ಸಾಧನಗಳನ್ನು ವಿತರಿಸಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಯ 600 ಮಂದಿ ಸೇರಿದ್ದಾರೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಶಾಖೆಯ ಸಭಾಪತಿ ಡಾ. ಉಮೇಶ್ ಪ್ರಭು ವಹಿಸಿದ್ದರು. ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ನಿರಂಜನ ಭಟ್, ಬ್ರೈಲ್ ತರಬೇತಿದಾರ ಪಕೀರೇಶ ಬಸಪ್ಪಕಾಳಿ, ಚಲನವಲನ ತರಬೇತಿದಾರ ದಿನೇಶ್ ಎಚ್., ರೆಡ್‌ಕ್ರಾಸ್ ಉಡುಪಿ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈ.ಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News