ಅತ್ತೂರಿನಲ್ಲಿ ಮಾನಸ್ತಂಭ ಉದ್ಘಾಟನೆ

Update: 2018-01-21 12:14 GMT

ಕಾರ್ಕಳ, ಜ. 21: ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟಂತೆ ದೇಗುಲವೊಂದಕ್ಕೆ ಶಾಶ್ವತವಾಗಿ ಸಲ್ಲುವ ಅತ್ತ್ಯುನ್ನತ ಗೌರವ ಪಡೆದ ಬಸಿಲಿಕಕ್ಕೆ ಮಾತ್ರ ಸೀಮಿತವಾದ ಮಾನಸ್ತಂಭವು ರವಿವಾರ ಅತ್ತೂರಿನಲ್ಲಿ  ಉದ್ಘಾಟನೆಗೊಂಡಿತು.

ಚರ್ಚ್‌ನ ಬಲ ಬದಿಯಲ್ಲಿ ಮಾನಸ್ತಂಬವನ್ನು ನೂತನವಾಗಿ ನಿರ್ಮಿಸಲಾಗಿದೆ. ಸುಮಾರು 43 ಅಡಿ ಎತ್ತರದ, ದಾನಿಗಳ ಸಹಕಾರದಿಂದ ರ್ನಿುಸಲ್ಪಟ್ಟ ಈ ಮಾನಸ್ತಂಭದ ತಳದಲ್ಲಿ ಅಷ್ಟಪಟ್ಟಿಯಲ್ಲಿ ಎಂಟು ಭಾಗಗಳನ್ನು ಮಾಡಲಾಗಿದ್ದು, ಚರ್ಚ್‌ಗೆ ಅಭಿಮುಖವಾಗಿ ದಕ್ಷಿಣ ದಿಕ್ಕಿನಲ್ಲಿ ಬಸಿಲಿಕದ ಘೋಷಣಾ ದಿನಾಂಕ (1-8-2016) ನಂತರದ ಪಟ್ಟಿಗಳಲ್ಲಿ ಅನುಕ್ರಮವಾಗಿ ಚರ್ಚ್‌ನ ಚಿತ್ರ, ಮಾನಸ್ತಂಭ ಉದ್ಘಾಟನಾ ದಿನಾಂಕ (21-01-2018), ಸಂತ ಲಾರೆನ್ಸರ ಚಿತ್ರ, ಪತ್ರ ಕ್ರಾಸ್, ಪವಾಡ ಮೂರ್ತಿ, ದಾನಿಗಳ ಹೆಸರು ಮತ್ತು ಬಸಿಲಿಕಾದ ಲಾಂಛನವನ್ನು ಇಲ್ಲಿ ಕಲ್ಲಿನಿಂದ ಕೆತ್ತಲಾಗಿದೆ.

ಮಾನಸ್ತಂಭದಲ್ಲಿ ಪ್ರತಿ ವರ್ಷ ವಾರ್ಷಿಕ ಹಬ್ಬದ 5 ದಿನಗಳಲ್ಲಿ, ಬಸಿಲಿಕ ಆದೇಶ ಹೊರಡಿಸಿದ ಎ. 26ರಂದು, ಬಸಿಲಿಕ ಘೋಷಣೆಯಾದ ಆ. 1ರಂದು ಹಾಗೂ ಸಂತ ಲಾರೆನ್ಸರ ಹಬ್ಬವಾದ ಆ. 10ರಂದು ಹೀಗೆ 4 ಬಾರಿ ಕ್ರೈಸ್ತ ಧರ್ಮಕ್ಕೆ ಸಂಬಂಧಪಟ್ಟ ಧ್ವಜಾರೋಹಣ ಮಾಡಲಾಗುವುದು. ವಾರ್ಷಿಕ ಹಬ್ಬದ ಪ್ರಾರಂಭದ ದಿನ ಧ್ವಜಾರೋಹಣಗೈದು, ಕೊನೆಯ 5ನೆ ದಿನ ಸಂಜೆ ಹಬ್ಬ ಮುಗಿದ ಬಳಿಕ ಧ್ವಜಾವರೋಹಣ ಮಾಡಲಾಗುವುದು.

ಉದ್ಘಾಟನಾ ಸಮಾರಂಭದಲ್ಲಿ ಬಸಿಲಿಕಾ ನಿರ್ದೇಶಕ ಹಾಗೂ ಧರ್ಮಗುರುಗಳಾದ ಜೋರ್ಜ್ ಡಿಸೋಜಾ, ಸಹಾಯಕ ಧರ್ಮಗುರುಗಳಾದ ಜೆನ್ಸಿಲ್ ಆಳ್ವ, ಇತರ ಚರ್ಚ್‌ಗಳ ಧರ್ಮಗುರುಗಳು, ಪಾಲನಾ ಮಂಡಳಿ ಉಪಾಧ್ಯಕ್ಷ ಜಾನ್ ಆರ್ ಡಿಸಿಲ್ವಾ, ಕಾರ್ಯದರ್ಶಿ ಲೀನಾ ಡಿಸಿಲ್ವಾ ಹಾಗೂ ಇತರ ಸದಸ್ಯರುಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News