ಕೇಂದ್ರ ಸಚಿವರ ಹೇಳಿಕೆ ವಿಜ್ಞಾನಕ್ಕೆ ಮಾಡಿದ ಅವಮಾನ ಎಂದ ವಿಜ್ಞಾನಿಗಳು

Update: 2018-01-21 13:57 GMT

ಹೊಸದಿಲ್ಲಿ, ಜ.21: ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದವನ್ನು ಪ್ರಶ್ನಿಸಿ ಕೇಂದ್ರ ಪ್ರಾಥಮಿಕ ಶಿಕ್ಷಣ ಸಚಿವರಾದ ಸತ್ಯಪಾಲ್ ಸಿಂಗ್ ನೀಡಿರುವ ಹೇಳಿಕೆಯನ್ನು ದೇಶದ ವಿಜ್ಞಾನಿಗಳ ಅತ್ಯುನ್ನತ ಸಂಸ್ಥೆಯಾಗಿರುವ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಐಎನ್‌ಎಸ್‌ಎ)ಯ ಮಾಜಿ ಅಧ್ಯಕ್ಷರೂ ಸೇರಿದಂತೆ ಹಲವು ಹಿರಿಯ ವಿಜ್ಞಾನಿಗಳು ಖಂಡಿಸಿದ್ದಾರೆ.

“ಡಾರ್ವಿನ್‌ನ ವಿಕಾಸವಾದವು ವೈಜ್ಞಾನಿಕವಾಗಿ ತಪ್ಪು, ಯಾಕೆಂದರೆ ಮಂಗನಿಂದ ಮಾನವನಾಗಿರುವುದನ್ನು ಯಾರೂ ಕಂಡವರಿಲ್ಲ. ಹಾಗಾಗಿ ಅದನ್ನು ವಿಜ್ಞಾನ ಪುಸ್ತಕಗಳಿಂದ ತೆಗೆದುಹಾಕಬೇಕು” ಎಂದು ಸತ್ಯಪಾಲ್ ಸಿಂಗ್ ತಿಳಿಸಿದ್ದರು.

ಈ ಬಗ್ಗೆ ರವಿವಾರದಂದು ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ ಐಎನ್‌ಎಸ್‌ಎಯ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಗಡಕ್ಕರ್, ಇದು ರಾಜಕೀಯವಾಗಿ ವಿಜ್ಞಾನ ಮತ್ತು ವಿಜ್ಞಾನಿಗಳನ್ನು ಧ್ರುವೀಕರಿಸುವ ತಂತ್ರವಾಗಿದೆ ಮತ್ತು ಅದನ್ನು ನಾವು ತಡೆಯುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ವಾಸ್ತವಾಂಶಗಳ ಆಧಾರದಲ್ಲಿ ಈ ಹೇಳಿಕೆಯು ಹಲವು ಮಟ್ಟಗಳಲ್ಲಿ ಸಮರ್ಥನೀಯವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪರಿಸರ ವಿಜ್ಞಾನ ಹಾಗೂ ವಿಕಾಸನೀಯ ವಿಜ್ಞಾನಗಳ ಉಪನ್ಯಾಸಕರಾಗಿರುವ ಗಡಕ್ಕರ್ ತಿಳಿಸಿದ್ದಾರೆ. ಅತ್ಯಂತ ಆರಂಭಿಕ ಹಂತದಲ್ಲೇ ಸಿಗುವ ಎಲ್ಲಾ ಪುರಾವೆಗಳು, ಐದು ಮಿಲಿಯನ್ ವರ್ಷಗಳ ಹಿಂದೆ ನಮ್ಮ ನಿಕಟ ಜೀವಿತ ಸಂಬಂಧಿಕರಾಗಿರುವ ಚಿಂಪಾಂಝಿಗಳಿಂದ ಮಾನವನ ವಿಕಾಸವಾಯಿತು ಎಂಬ ಮಾಹಿತಿಯನ್ನು ನೀಡುತ್ತದೆ. ಹಾಗಾಗಿ ಆ ಘಟನಾವಳಿಯನ್ನು ಕಣ್ಣಾರೆ ನೋಡುವ ಅಥವಾ ದಾಖಲಿಸಿಡುವ ಯಾವುದೇ ಸೌಲಭ್ಯಗಳು ನಮ್ಮ ಪೂರ್ವಜರಿಗಿರಲಿಲ್ಲ ಎಂದವರು ವಿವರಿಸಿದ್ದಾರೆ.

ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆಯಾದ ಕಿರಣ್ ಮಜುಮ್ದಾರ್, ಈ ಹೇಳಿಕೆಯು ಸಚಿವರ ಸ್ಥಾನಕ್ಕೆ ಮತ್ತು ವಿಜ್ಞಾನ ಹಾಗೂ ವಿಜ್ಞಾನಿಗಳಿಗೆ ಮಾಡಿದ ಅವಮಾನ ಎಂದು ಹೇಳಿಕೆ ನೀಡಿದ್ದಾರೆ. ಮಾಜಿ ಪರಿಸರ ಸಚಿವ ಮತ್ತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡಾ ಸಚಿವರ ಹೇಳಿಕೆಯನ್ನು ಅಸಂಬದ್ಧ ಎಂದು ಟೀಕಿಸಿದ್ದಾರೆ. ವೈಜ್ಞಾನಿಕವಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುವಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಸತ್ಯಪಾಲ್ ಈ ಹಿಂದೆಯೂ ಇದೇ ರೀತಿಯ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಪ್ರಧಾನಿ ಮೋದಿ ಮಾತ್ರ ಏನನ್ನೂ ಹೇಳದೆ ಮೌನ ವಹಿಸಿದ್ದಾರೆ ಎಂದು ಜೈರಾಮ್ ರಮೇಶ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಮ್ಮ ಹೇಳಿಕೆಯ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಸತ್ಯಪಾಲ್ ಸಿಂಗ್, ನಾನು ಕೂಡಾ ವಿಜ್ಞಾನ ಕಲಿತವನಾಗಿದ್ದೇನೆ. ನಾನು ಕಲಾ ವಿಭಾಗದಲ್ಲಿ ಕಲಿತವನಲ್ಲ. ನಾನು ದಿಲ್ಲಿ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಮಾಡಿದ್ದೇನೆ. ಡಾರ್ವಿನ್ ವಿಕಾಸವಾದವನ್ನು ಈಗ ಜಗತ್ತಿನೆಲ್ಲೆಡೆ ಪ್ರಶ್ನಿಸಲಾಗುತ್ತಿದೆ. ಡಾರ್ವಿನವಾದ ಎಂಬುವುದು ಒಂದು ಕಟ್ಟುಕತೆ. ನಾನು ಒಂದು ಹೇಳಿಕೆ ನೀಡಿದರೆ ಅದಕ್ಕೆ ಆಧಾರವಿರುತ್ತದೆ ಎಂದು ಸುದ್ದಿ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News