ಗ್ರಾಮೀಣ ಕ್ರೀಡೆಯಾದ ಕಂಬಳ ಉಳಿಸಲು ಕಾನೂನು ಜಾರಿ : ಸಚಿವ ಎ. ಮಂಜು

Update: 2018-01-21 14:20 GMT

ಪುತ್ತೂರು, ಜ. 21: ಪ್ರಾಚೀನ ಕಾಲದಿಂದ ನಡೆದು ಬಂದ ಗ್ರಾಮೀಣ ಕ್ರೀಡೆಯಾದ ಕಂಬಳವು ಹಿಂಸೆಯಿಂದ ಕೂಡಿಲ್ಲ. ಬದಲಾಗಿ ಅಹಿಂಸೆಯಿಂದ ಕೂಡಿರುವ ಕಂಬಳವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ನೂತನ ಕಾನೂನು ಜಾರಿಗೊಳಿಸಿದ್ದು, ಈ ಕಾನೂನಿಗೆ ರಾಷ್ಟ್ರಪತಿಯ ಅಂಕಿತವಾಗಲು ಬಾಕಿ ಇದೆ ಎಂದು ರಾಜ್ಯ ಪಶು ಸಂಗೋಪನಾ ಇಲಾಖೆಯ ಸಚಿವ ಎ.ಮಂಜು ಹೇಳಿದರು.

ಅವರು ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಶನಿವಾರ ಆರಂಭಗೊಂಡ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳದ  ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕಂಬಳ ಕೋಣಗಳನ್ನು ಅದರ ಮಾಲಕರು ಲಾಭಕ್ಕಾಗಿ ಸಾಕುತ್ತಿಲ್ಲ. ಕೋಣಗಳನ್ನು ತಮ್ಮ ಮಕ್ಕಳಂತೆ ಪೋಷಿಸಿ, ಪ್ರೀತಿ ತೋರುತ್ತಾರೆ ಎಂದ ಅವರು ಹಿಂಸೆಯಿಲ್ಲದ ಕಂಬಳಕ್ಕೆ ಕೂಡಲೇ ಅಂಗೀಕಾರದ ಮುದ್ರೆ ಬೀಳಬೇಕಾಗಿದೆ ಎಂದರು.

ಕಂಬಳದ ಸಾರಥ್ಯ ವಹಿಸಿರುವ ಜಯಕರ್ನಾಟಕ ಸಂಘಟನೆಯ ಸ್ಥಾಪಕಾಧ್ಯಕ್ಷ ಎನ್.ಮುತ್ತಪ್ಪ ರೈ ಅವರು ಮಾತನಾಡಿ ಜಿಲ್ಲೆಯಲ್ಲಿ ಪುತ್ತೂರು ಕಂಬಳ ನಂಬನ್ ಒನ್ ಸ್ಥಾನದಲ್ಲಿದ್ದು,ಈ ಸ್ಥಾನವನ್ನು ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದರು.

ಕಂಬಳ ಅಕಾಡಮಿಯ ಕೆ.ಗುಣಪಾಲ ಕಡಂಬ ಅವರು ಮಾತನಾಡಿ, ಕಂಬಳವು ಹಿಂಸೆಯಿಂದ ಕೂಡಿದೆ ಎಂದು ನ್ಯಾಯಾಲಯದ ಮೊರೆ ಹೋದವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕಂಬಳದಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಜಯಕರ್ನಾಟಕದ ಸಂಸ್ಥಾಪಕ ಎನ್. ಮುತ್ತಪ್ಪ ರೈ ಮತ್ತು ಅನುರಾದ ದಂಪತಿ, ಕಂಬಳ ಸಮಿತಿ ಗೌರವ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ವಿಜಯ ಬ್ಯಾಂಕ್‌ನ ನಿವೃತ್ತ ಜನ್‌ರಲ್ ಮೆನೇಜರ್ ಕೆ. ಜಯಕರ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಜಯಕರ ಶೆಟ್ಟಿ ಮಾತನಾಡಿದರು.

ಕಂಬಳ ರಜತಾ ಮಹೋತ್ಸವದ ನೆನಪಿನಲ್ಲಿ ಹೊರತರಲಾದ ವಿಶೇಷ ಸಂಚಿಕೆ ‘ಬೊಳ್ಳಿಕೆರೆ’ಯನ್ನು ಎನ್ ಮುತ್ತಪ್ಪ ರೈ ಲೋಕಾರ್ಪಣೆಗೊಳಿಸಿದರು. ಕಳೆದ 25 ವರ್ಷಗಳಿಂದ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಬೋಳಂತೂರು ಗುತ್ತು ದಿ. ಗಂಗಾಧರರೈ ಅವರ ಕೋಣಕ್ಕೆ ಕಾಟಿ ಸನ್ಮಾನ ನೀಡಿ ಗೌರವಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕಿ ಶಕುಂತಳಾ ಶೆಟ್ಟಿ, ಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್, ನಟ ರಂಗಾಯಣ ರಘು, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ, ಅದಾನಿ ಪವರ್ ಗ್ರೂಪ್ ಪಡುಬಿದ್ರಿ ಇದರ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಕಸ್ಟಮ್ಸ್ ಇಲಾಖೆಯ ಅಧಿಕಾರಿ ರೋಹಿತ್ ಹೆಗ್ಡೆ ಎರ್ಮಾಳ್, ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ , ಡಾ. ರೇಣುಕಾ ಪ್ರಸಾದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ ಕುಮಾರ್, ದಿವ್ಯಪ್ರಭಾ ಚಿಲ್ತಡ್ಕ, ಉಮೇಶ್ ನಾಡಾಜೆ, ಡಾ.ಮಹಮ್ಮದ್ ಇಬ್ರಾಹಿಂ, ನವೀನ್ ಭಂಡಾರಿ, ಕೆ.ಎನ್. ಜಗದೀಶ್, ಸರ್ವೋತ್ತಮ ಗೌಡ, ಪಿ.ಪಿ. ವರ್ಗೀಸ್, ಉಷಾ ಅಂಚನ್, ವಿಜಯ ಕುಮಾರ್ ಸೊರಕೆ, ಈಶ್ವರ ಭಟ್ ಪಂಜಿಗುಡ್ಡೆ, ಸುರೇಂದ್ರನಾಥ ಆಳ್ವ, ಶಿವರಾಮ ಆಳ್ವ, ವಿಜಯ ಕುಮಾರ್ ರೈ ಮುದಲೆಮಾರ್, ಸನ್ಮತ್ ಮೇಲಾಂಟ, ಪಿ.ಬಿ.ದಿವಾಕರ್, ಮಹಮ್ಮದ್ ಕುಕ್ಕುವಳ್ಳಿ, ಕಂಬಳ ಸಮಿತಿಯ ಸಂಚಾಲಕ ಎನ್.ಸುಧಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್, ಕೋಶಾಧಿಕಾರಿ ಪ್ರಸನ್ನ ಶೆಟ್ಟಿ ,ಉದ್ಯಮಿ ಕರುಣಾಕರ ರೈ ಮತ್ತಿತರರು ಭಾಗವಹಿಸಿದ್ದರು.

ಕಂಬಳ ಸಮಿತಿ ಗೌರವ ಅಧ್ಯಕ್ಷ ಶಾಸಕ ವಿನಯ ಕುಮಾರ್ ಸೊರಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

ಕೋಟಿಚೆನ್ನಯ ಜೋಡುಕರೆ ಕಂಬಳ ಫಲಿತಾಂಶ

ಪುತ್ತೂರು: 25ನೆ ವರ್ಷದ ಪುತ್ತೂರು ಕೋಟಿಚೆನ್ನಯ ಜೋಡುಕರೆ ಕಂಬಳದಲ್ಲಿ 149 ಜೊತೆ ಕೋಟಗಳು ಭಾಗವಹಿಸಿದ್ದು, ಕನಹಲಗೆ, ಅಡ್ಡಹಲಗೆ, ಹಗ್ಗ ಹಿರಿಯ ಮತ್ತು ಕಿರಿಯ, ನೇಗಿಲು ಹಿರಿಯ ಮತ್ತು ಕಿರಿಯ ಸ್ಪರ್ಧೆಗಳು ನಡೆಯಿತು.

ಕನಹಲಗೆಯಲ್ಲಿ ಬಾರ್ಕೂರು ಶಾಂತಾರಾಮ ಶೆಟ್ಟಿ ಪ್ರಥಮ, ವಾಮಂಜೂರು ತಿರುವೈಲುಗುತ್ತು ಅಭಯ ನವೀನ್ಚಂದ್ರ ಆಳ್ವ ದ್ವೀತೀಯ ಮತ್ತು ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಅಡ್ಡ ಹಲಗೆಯಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಪ್ರಥಮ, ಹಂಕರಜಾಲು ಭಿರ್ಮಣ್ಣ ಶ್ರೀನಿವಾಸ ಶೆಟ್ಟಿ ದ್ವಿತೀಯ ಸ್ಥಾನ ಪಡೆದುಕೊಂಡರು.
 
ಹಗ್ಗ ಹಿರಿಯದಲ್ಲಿ ಕಾರ್ಕಳ ಜೀವನ್‌ದಾಸ್ ಅಡ್ಯಂತಾಯ ಪ್ರಥಮ, ಪದವು ಕಾನಡ್ಕ ಫ್ರಾನ್ಸಿಸ್ ಪ್ಲೇವಿ ಡಿಸೋಜ ದ್ವಿತೀಯ ಸ್ಥಾನ, ಹಗ್ಗ ಕಿರಿಯದಲ್ಲಿ ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ ಪ್ರಥಮ, ಮೂಡಬಿದಿರೆ ಹೊಸಬೆಟ್ಟು ಎರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ ದ್ವಿತೀಯ ಸ್ಥಾನ ಪಡೆದರು. ನೇಗಿಲು ಹಿರಿಯದಲ್ಲಿ ಮುಂಡ್ಕೂರು ಮುಲ್ಲಡ್ಕ ರವೀಂದ್ರ ಶೆಟ್ಟಿ ಪ್ರಥಮ, ಮಾಣಿ ಸಾಗು ಹೊಸಮನೆ ಉಮೇಶ್ ಮಹಾಬಲ ಶೆಟ್ಟಿ ದ್ವಿತೀಯ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿ ಕನಹಲಗೆ 5 ಜೊತೆ, ಅಡ್ಡ ಹಲಗೆ 5 ಜೊತೆ ಹಗ್ಗ ಹಿರಿಯ 25 ಜೊತೆ, ಹಗ್ಗ ಕಿರಿಯ 14 ಜೊತೆ, ನೇಗಿಲು ಹಿರಿಯ 30 ಜೊತೆ ಮತ್ತು ನೇಗಿಲು ಕಿರಿಯ 70 ಜೊತೆ ಸೇರಿದಂತೆ ಒಟ್ಟು 149 ಜೊತೆ ಕೋಣಗಳು ಭಾಗವಹಿಸಿದ್ದವು.

ಕಂಭಳ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ, ಸದಸ್ಯ ಕರುಣಾಕರ ರೈ ಸಾಜ, ದ.ಕ.ಜಿ.ಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಯಕರ್ನಾಟಕ ತಾಲೂಕು ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಹೊಟೇಲ್ ಸುಜಾತ ಮಾಲಕ ಸುಶಾಮ್ ಶೆಟ್ಟಿ ವಿಜೇತ ಕೋಣದ ಯಜಮಾನರಿಗೆ ಬಹುಮಾನ ವಿತರಿಸಿದರು.

ಮಾಜಿ ಉಪವಲಯ ಸಂಕ್ಷರಣಾಧಿಕಾರಿ ಕೃಷ್ಣಪ್ಪ, ಉದ್ಯಮಿ ರೋಶನ್ ರೈ ಬನ್ನೂರು, ಮುಳಿಯ ಜ್ಯುವೆಲ್ಲರ್ಸ್‌ನ ಕೇಶವ ಪ್ರಸಾದ್ ಮುಳಿಯ, ಯಮುನಾ ಬೋರ್‌ವೆಲ್ ಮಾಲಕ ಕೃಷ್ಣ ಶೆಟ್ಟಿ, ವಿಘ್ನೇಶ್ವರ ಇಂಡಸ್ಟ್ರೀಸ್‌ನ ಸುಧೀರ್ ಶೆಟ್ಟಿ, ಪಂಜ ವಲಯ ಆರ್‌ಎಫ್‌ಒ ಪ್ರವೀಣ್ ಶೆಟ್ಟಿ, ಉದ್ಯಮಿ ಆನಂದ ಗೌಡ, ಗುಣಪಾಲ ಕಡಂಬ, ಪಂಜಿಗುಡ್ಡೆ ಈಶ್ವರ ಭಟ್ ಮತ್ತಿತರರು ಪಾಲ್ಗೊಂಡು ಶುಭ ಹಾರೈಸಿದರು.

ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಪಿ.ಎನ್., ಪ್ರಧಾನ ತೀರ್ಪುಗಾರ ಯಡ್ತೂರು ರಾಜೀವ ಶೆಟ್ಟಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಮಾರಂಭದಲ್ಲಿ ತೀರ್ಪುಗಾರರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News