ನಾನು ವಿಜ್ಞಾನ ಪದವೀಧರ, ಆಧಾರವಿಲ್ಲದೆ ಹೇಳಿಲ್ಲ ಎಂದ ಕೇಂದ್ರ ಸಚಿವ

Update: 2018-01-21 14:45 GMT

ಹೊಸದಿಲ್ಲಿ, ಜ.21: ಚಾರ್ಲ್ಸ್ ಡಾರ್ವಿನ್ ನ ವಿಕಾಸವಾದದ ಬಗ್ಗೆ ಪ್ರಶ್ನಿಸಿದ್ದ ಸಹಾಯಕ ಶಿಕ್ಷಣ ಸಚಿವ ಸತ್ಯಪಾಲ್ ಸಿಂಗ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. “ನಾನು ಕಲಾ ಪದವೀಧರನಲ್ಲ. ವಿಜ್ಞಾನ ಪದವೀಧರ. ದಿಲ್ಲಿ ವಿವಿಯಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದೇನೆ” ಎಂದಿದ್ದಾರೆ.

ಈ ಮಧ್ಯೆ ಸತ್ಯಪಾಲ್ ಸಿಂಗ್ ಹೇಳಿಕೆಗೆ ವಿಜ್ಞಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿದೆ. ವಿಜ್ಞಾನ ಮತ್ತು ವಿಜ್ಞಾನಿಗಳನ್ನು ರಾಜಕೀಯ ಧ್ರುವೀಕರಣಗೊಳಿಸುವ ಉದ್ದೇಶದ ಹೇಳಿಕೆ ಇದಾಗಿದ್ದು ಇಂತಹ ಉದ್ದೇಶಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಹಿರಿಯ ವಿಜ್ಞಾನಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ರಾಘವೇಂದ್ರ ಗದಗ್‌ಕರ್ ಹೇಳಿದ್ದಾರೆ. ಸುಮಾರು 5 ಮಿಲಿಯ ವರ್ಷಗಳ ಹಿಂದೆ ಮಾನವರು ಚಿಂಪಾಂಝಿಗಳಿಂದ ಪ್ರತ್ಯೇಕಗೊಂಡರು ಎಂಬುದಕ್ಕೆ ಪೂರಕ ಪುರಾವೆಗಳಿವೆ. ಈ ವಿಕಾಸಕ್ರಿಯೆಯನ್ನು ದಾಖಲೀಕರಣಗೊಳಿಸುವ ವ್ಯವಸ್ಥೆ ಆಗ ನಮ್ಮ ಪೂರ್ವಜರ ಬಳಿ ಇರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಹೇಳಿಕೆ ವಿಜ್ಞಾನಿಗಳಿಗೆ ಹಾಗೂ ವಿಜ್ಞಾನಕ್ಕೆ ಮಾಡಿರುವ ಅಪಮಾನವಾಗಿದೆ . ಓರ್ವ ಜೀವಶಾಸ್ತ್ರಜ್ಞೆಯಾಗಿರುವ ತನಗೆ ಇದಕ್ಕೆ ಏನನ್ನಬೇಕು ಎಂದು ತಿಳಿಯುತ್ತಿಲ್ಲ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಮ್ದಾರ್ ಶಾ ಪ್ರತಿಕ್ರಿಯಿಸಿದ್ದಾರೆ.

ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸಚಿವರು, ಡಾರ್ವಿನ್ ವಿಕಾಸವಾದದ ಕುರಿತು ವಿಶ್ವದೆಲ್ಲೆಡೆ ಪ್ರಶ್ನಿಸಲಾಗುತ್ತಿದೆ. “ಡಾರ್ವಿನ್ ವಿಕಾಸವಾದ ಒಂದು ಕಾಲ್ಪನಿಕ ಕಥೆಯಾಗಿದೆ. ನಾನು ಆಧಾರವಿಲ್ಲದೆ ಯಾವ ಹೇಳಿಕೆಯನ್ನೂ ನೀಡುವುದಿಲ್ಲ. ವಿಜ್ಞಾನದ ಹಿನ್ನೆಲೆ ನನಗಿದೆ. ದಿಲ್ಲಿ ವಿವಿಯಲ್ಲಿ ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದಿದ್ದೇನೆ” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News