ನಿಝಾಮರ ಮಾನ್ಯತೆಗೆ ಸಂಬಂಧಿಸಿದ ದಾಖಲೆಗಳೆಲ್ಲಿವೆ?

Update: 2018-01-21 14:16 GMT

ಹೊಸದಿಲ್ಲಿ,ಜ.21: ಗೃಹಸಚಿವಾಲಯವನ್ನು ತರಾಟೆಗೆತ್ತಿಕೊಂಡಿರುವ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ನವಾಬ್ ಮೀರ್ ಬರ್ಕತ್ ಅಲಿ ಖಾನ್ ಅವರನ್ನು ಹೈದರಾಬಾದ್‌ನ ನಿಝಾಮರೆಂದು ಕೇಂದ್ರವು ಮಾನ್ಯ ಮಾಡಿದ್ದ 50 ವರ್ಷಗಳಷ್ಟು ಹಳೆಯ ದಾಖಲೆಗಳೆಲ್ಲಿವೆ ಎಂದು ಪ್ರಶ್ನಿಸಿದೆ. ಈ ಪ್ರಮುಖ ಕಡತದ ಬಗ್ಗೆ ತನಗೇನೂ ಗೊತ್ತಿಲ್ಲವೆಂದು ಸಚಿವಾಲಯವು ಹೇಳಿಕೊಂಡಿದೆ.

 ತನ್ನ ಆದೇಶದ ಪ್ರತಿಯನ್ನು ಕೇಂದ್ರ ಗೃಹ ಕಾರ್ಯದರ್ಶಿಗಳಿಗೆ ರವಾನಿಸಿರುವ ಮಾಹಿತಿ ಆಯಕ್ತ(ಸಿಐಸಿ) ಯಶೋವರ್ಧನ ಆಝಾದ್ ಅವರು, ಇಂತಹ ಐತಿಹಾಸಿಕ ಮಹತ್ವದ ಕಡತಗಳನ್ನು ಗುರುತಿಸಲು ಸಮಿತಿಯೊಂದನ್ನು ರಚಿಸುವಂತೆ ಮತ್ತು ಈ ಕಡತಗಳನ್ನು ರಾಷ್ಟ್ರೀಯ ಪತ್ರಾಗಾರಕ್ಕೆ ಹಸ್ತಾಂತರಗೊಳಿಸುವಂತೆ ಶಿಫಾರಸು ಮಾಡಿದ್ದಾರೆ.

ನಾಪತ್ತೆಯಾಗಿರುವ ಕಡತಕ್ಕಾಗಿ ಹೊಸದಾಗಿ ಶೋಧವನ್ನು ನಡೆಸುವಂತೆ ಮತ್ತು ಅದು ಪತ್ತೆಯಾದರೆ ಪ್ರಮಾಣೀಕೃತ ಮಾಹಿತಿಯನ್ನು ಆರ್‌ಟಿಐ ಅರ್ಜಿದಾರ ಸೈಯದ್ ಖಾಲಿಕ್ ಅವರಿಗೆ ನೀಡುವಂತೆಯೂ ಅವರು ಗೃಹ ಸಚಿವಾಲಯಕ್ಕೆ ನಿರ್ದೇಶಿಸಿದ್ದಾರೆ.

ಪ್ರಕರಣದ ಬೇರುಗಳು ಹೈದರಾಬಾದ್ ಸಂಸ್ಥಾನದ ಕೊನೆಯ ನಿಜಾಮರಾಗಿದ್ದ ಮೀರ್ ಉಸ್ಮಾನ್ ಅಲಿ ಖಾನ್ ಅವರವರೆಗೆ ತಲುಪಿವೆ. ಅವರು ತನ್ನ ಉತ್ತರಾಧಿಕಾರಿ ಯನ್ನಾಗಿ ಮೊಮ್ಮಗ ನವಾಬ್ ಮೀರ್ ಬರ್ಕತ್ ಅಲಿ ಖಾನ್ ಅಲಿಯಾಸ್ ಮುಕರ್ರಮ್ ಝಾ ಬಹದೂರ್ ಅವರನ್ನು ಹೆಸರಿಸುವ ಮೂಲಕ ಅವರನ್ನು ಹೈದರಾಬಾದ್‌ನ ನಾಮಮಾತ್ರ ನಿಜಾಮರನ್ನಾಗಿಸಿದ್ದರು. ಇದಕ್ಕಾಗಿ ಅಗತ್ಯ ಮಾನ್ಯತೆಗಾಗಿ ಅವರು ಭಾರತ ಸರಕಾರವನ್ನು ಕೋರಿಕೊಂಡಿದ್ದರು.

ಕೇಂದ್ರ ಸರಕಾರವು ಮೀರ್ ಬರ್ಕತ್ ಅಲಿ ಖಾನ್ ಅವರನ್ನು ಹೈದರಾಬಾದ್‌ನ ಆಡಳಿತಗಾರರಾಗಿ ಮಾನ್ಯತಾ ಪ್ರಮಾಣಪತ್ರವನ್ನು ನಿಜಾಮ್ ಅವರು ನಿಧನ ಹೊಂದಿದ್ದ ದಿನಾಂಕವಾದ 1967,ಫೆ.24ರಿಂದ ಅನ್ವಯವಾಗುವಂತೆ ಹೊರಡಿಸಿತ್ತು.

ನಿಜಾಮರ ನಿಧನಾನಂತರ ಅವರ ಎಲ್ಲ ಚರ ಮತ್ತು ಸ್ಥಿರಾಸ್ತಿಗಳಿಗೆ ಖಾನ್ ಅವರು ಮಾಲಿಕರಾಗಿದ್ದು, ಇದರೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಸಾಲಿಗೆ ಸೇರಿದ್ದರು.

ಹೈದರಾಬಾದ್‌ನ ನಾಮಮಾತ್ರ ನಿಜಾಮರಾಗಿದ್ದ ಖಾನ್ ಅವರ ಬಂಧುಗಳು ಹೂಡಿದ್ದ ಹಲವಾರು ದಾವೆಗಳಲ್ಲಿ ಈ ಪ್ರಮಾಣಪತ್ರವು ಕೇಂದ್ರಬಿಂದುವಾಗಿತ್ತು.

ಖಾಲಿಕ್ ಅವರು 1967,ಫೆ.27ರ ಕಡತದಿಂದ ಈ ಪ್ರಮಾಣಪತ್ರದ ಪ್ರಮಾಣೀಕೃತ ಪ್ರತಿಗಾಗಿ ಕೇಂದ್ರ ಗೃಹ ಸಚಿವಾಲಯವನ್ನು ಕೋರಿಕೊಂಡಿದ್ದಾರೆ.

ಖಾಲಿಕ್ ಅವರ ಅರ್ಜಿಯನ್ನು ಸಚಿವಾಲಯವು ರಾಷ್ಟ್ರೀಯ ಪತ್ರಾಗಾರ(ಎನ್‌ಎಐ)ಕ್ಕೆ ಕಳುಹಿಸಿದ್ದು, ಹಳೆಯ ಕಡತಗಳನ್ನು ಪತ್ರಾಗಾರಕ್ಕೆ ವರ್ಗಾಯಿಸುವಂತೆ ಸುಮಾರು 1,981 ಸೂಚನೆಗಳು ತನಗೆ ಬಂದಿವೆ ಎಂದು ತಿಳಿಸಿತ್ತು.

ಆದರೆ ಸಚಿವಾಲಯದಿಂದ ತನಗೆಂದೂ ಈ ಕಡತ ಬಂದಿಲ್ಲ ಎಂದು ಎನ್‌ಎಐ ಸಿಐಸಿಗೆ ಸ್ಪಷ್ಟಪಡಿಸಿತ್ತು.

   ತಮ್ಮಲ್ಲಿರುವ ಎಲ್ಲ ಕಡತಗಳು ಡಿಜಿಟಲೀಕರಣಗೊಂಡಿದ್ದು, ಅಧಿಕೃತ ಜಾಲತಾಣದಲ್ಲಿ ಲಭ್ಯವಿವೆ ಎಂದು ಎನ್‌ಎಐನ ಸಾರ್ವಜನಿಕ ಮಾಹಿತಿ ಅಧಿಕಾರಿ(ಪಿಐಒ)ತಿಳಿಸಿದ್ದಾರೆ. ಇಂತಹ ಕಡತ ತಮಗೆ ಬಂದಿಲ್ಲ ಎನ್ನುವುದು ಅವರಿಗೆ ಖಚಿತವಿದೆ. ಆದರೆ ಇಂತಹ ಕಡತದ ಅಸ್ತಿತ್ವದ ಬಗ್ಗೆ ಗೃಹ ಸಚಿವಾಲಯದ ಪಿಐಒಗೆ ಖಚಿತವಿದ್ದಂತಿಲ್ಲ ಎಂದು ಆಝಾದ್ ಬೆಟ್ಟು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News