ಹೊಂದಾಣಿಕೆ ಇಲ್ಲದ ಹೆಣ್ಣು ಮಕ್ಕಳಲ್ಲಿ ಮಾನಸಿಕ ಕಾಯಿಲೆ: ಡಾ.ಪ್ರೀತಿ

Update: 2018-01-21 14:42 GMT

ಉಡುಪಿ, ಜ.21: ಒಂಟಿ ಸಂಸಾರದ ಇಂದಿನ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಹೊಂದಾಣಿಕೆ ಬಹಳ ಕಷ್ಟವಾಗುತ್ತಿದೆ. ಬಿಡುವಿಲ್ಲದ ಪರಿಸ್ಥಿತಿಯಲ್ಲಿ ಹೊಂದಾಣಿಕೆಯ ಬಗ್ಗೆ ಹೇಳುವ ಹಾಗೂ ಕೇಳುವ ಸಮಯ ಪೋಷಕರಿಗೂ ಹಾಗೂ ಮಕ್ಕಳಿಗೂ ಇಲ್ಲವಾಗಿದೆ. ಇದರ ಪರಿಣಾಮ ಇಂದು ಹೆಣ್ಣು ಮಕ್ಕಳು ಖಿನ್ನತೆ, ದುಃಖ, ಆತಂಕಗಳಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಶಿವಮೊಗ್ಗದ ಮನೋ ತಜ್ಞೆ ಡಾ.ಪ್ರೀತಿ ಶಾನುಭಾಗ್ ಹೇಳಿದ್ದಾರೆ.
ಸಾವಣ್ಣ ಪ್ರಕಾಶನದ ವತಿಯಿಂದ ಉಡುಪಿಯ ಮನೋತಜ್ಞ ಡಾ.ವಿರೂ ಪಾಕ್ಷ ದೇವರಮನೆ ಅವರ ‘ಹೋಗಿ ಬಾ ಮಗಳೇ...’ ಪುಸ್ತಕವನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಇಂದು ಹೆಣ್ಣುಮಕ್ಕಳಿಗೆ ಸಿಗುವ ಸಂಪನ್ಮೂಲ, ಅವಕಾಶ, ಶಿಕ್ಷಣ, ಆರ್ಥಿಕ ಸ್ವಾತಂತ್ರವು ಹಿಂದಿಗಿಂತ ಹೆಚ್ಚು. ಅದೇ ರೀತಿ ಹಿಂದಿಗಿಂತ ಇಂದು ಒತ್ತಡವನ್ನು ಅನುಭವಿಸುವುದು ಕೂಡ ಅವರೇ ಆಗಿದ್ದಾರೆ ಎಂದ ಅವರು, ಮನಸ್ಸಿನ ಒತ್ತಡ, ವೇದನೆ ನಮ್ಮ ದೇಹದ ಮೇಲು ಪರಿಣಾಮ ಬೀರಿ ದೈಹಿಕ ಕಾಯಿಲೆಗಳಿಗೂ ನಾವು ತುತ್ತಾಗುತ್ತೇವೆ. ಇದು ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದರು.

ಮದುವೆ ನಮ್ಮ ಜೀವನ ಅತಿ ಮುಖ್ಯ ನಿರ್ಧಾರ. ಆದುದರಿಂದ ಮದುವೆಗೆ ಸಾಕಷ್ಟು ಪೂರ್ವ ತಯಾರಿ ಅಗತ್ಯ. ಇಂದಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮದುವೆಯ ಪೂರ್ವ ತಯಾರಿ ಗಂಡಿಗಿಂತ ಹೆಣ್ಣು ಮಕ್ಕಳಿಗೆ ಹೆಚ್ಚು ಇರುತ್ತದೆ. ಇಂದು ಭಾರತದಲ್ಲಿ ವಿಚ್ಛೇಧನೆ ಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ನಮ್ಮ ದೇಶದಲ್ಲಿ ಇಂದು ಮದುವೆಗಳನ್ನು ಮುರಿಯುದಕ್ಕಿಂತ ಹೆಚ್ಚಾಗಿ ಒಟ್ಟುಗೂಡಿಸುವ ಪ್ರಯತ್ನಗಳು ಹೆಚ್ಚಿನ ಕುಟುಂಬಗಳಲ್ಲಿ ನಡೆಯುತ್ತಿರುತ್ತವೆ ಎಂದರು.
ಹೆಣ್ಣು ಮಕ್ಕಳಿಗೆ ಸ್ವಾತಂತ್ರ ಸಿಕ್ಕಿದೆ ಎಂದು ನಾವು ಅನಿಸಿಕೊಂಡರೂ ಸಣ್ಣ ಸಣ್ಣ ವಿಷಯಗಳಲ್ಲಿ ಗಂಡು ಹೆಣ್ಣಿನ ಮಧ್ಯೆ ತಾರತಮ್ಯಗಳು ಇಂದಿಗೂ ಕಂಡು ಬರುತ್ತಿವೆ. ನಮ್ಮ ಯೋಚನೆ ಇಂದಿಗೂ ಒಂದು ಚೌಕಟ್ಟಿನಲ್ಲಿದೆ. ಆದುದರಿಂದ ಗಂಡು ಹೆಣ್ಣು ಎಂಬ ಬೇಧ ಭಾವ ಕೂಡ ನಮ್ಮ ಮನಸ್ಸಿನ ಆಳದಲ್ಲಿ ಈಗಲೂ ಇದೆ ಎಂದು ಅವರು ಹೇಳಿದರು.

ಉಡುಪಿ ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ. ಭಂಡಾರಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಗಿರಿಜಾ ರಾವ್, ಮಣಿಪಾಲ ಯುರೋಪಿಯನ್ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ನೀತಾ ಇನಾಂದಾರ್, ಸಾವಣ್ಣ ಪ್ರಕಾಶನದ ಜಮೀರ್ ಉಪಸ್ಥಿತರಿದ್ದರು.
ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವೀಣಾ ವಿರೂಪಾಕ್ಷ ಸ್ವಾಗತಿಸಿದರು. ಪೂರ್ಣಿಮಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

ಹೊಂದಾಣಿಕೆ ಇಂದಿನ ಅಗತ್ಯ

ಒಂದು ಕಡೆ ಅತಿಯಾದ ಸ್ವಾತಂತ್ರ ಇದ್ದರೂ ಅದನ್ನು ಬಳಕೆ ಮಾಡುವುದು ಮತ್ತು ಅದರ ಜವಾಬ್ದಾರಿಗಳ ಬಗ್ಗೆ ಅರಿವೇ ಇಲ್ಲದ ಹೆಣ್ಣು ಮಕ್ಕಳಿದ್ದರೆ, ಇನ್ನೊಂದು ಕಡೆ ತಮ್ಮ ಹಕ್ಕುಗಳ ಬಗ್ಗೆ ಅರಿವೇ ಇಲ್ಲದ ಹೆಣ್ಣು ಮಕ್ಕಳು ನಮ್ಮ ದೇಶದಲ್ಲಿದ್ದಾರೆ. ಇದನ್ನು ಸರಿತೂಗಿಸಬೇಕು. ಹೊಂದಾಣಿಕೆ ಮಾಡಿ ಜೀವನ ನಡೆಸುವಂತಾಗಬೇಕು. ಕೇವಲ ಮಹಿಳಾ ಹಕ್ಕುಗಳನ್ನು ಮಾತ್ರ ಪ್ರತಿಪಾದಿಸಿ ಕೊಂಡು ಹೋದರೆ ನಮ್ಮ ಸುತ್ತಮುತ್ತಲಿನ ಎಲ್ಲ ಸಂಬಂಧಗಳನ್ನು ನಾವು ಕಳೆದು ಕೊಳ್ಳಬೇಕಾಗುತ್ತದೆ ಎಂದು ಡಾ.ಪ್ರೀತಿ ಶಾನುಭಾಗ್ ಅಭಿಪ್ರಾಯ ಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News