ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಿದ ಅಗ್ನಿಶಾಮಕದಳ ಸಿಬ್ಬಂದಿ

Update: 2018-01-21 14:44 GMT

ಬೆಂಗಳೂರು,ಜ.21: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕದಳ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಕೆರೆಯ ಬೆಂಕಿಯ ಜ್ವಾಲೆಗಳನ್ನು ಸಂಪೂರ್ಣ ನಂದಿಸಲಾಗಿದೆಯಾದರೂ ಹೊಗೆಯಾಡುತ್ತಿರುವುದರಿಂದ ಮತ್ತೆ ಯಾವಾಗ ಬೇಕಾದರೂ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಎರಡು ಅಗ್ನಿಶಾಮಕ ವಾಹನಗಳನ್ನು ಕೆರೆಯಂಚಿನಲ್ಲೇ ನಿಲ್ಲಿಸಿ 10 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಆಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಬಹುತೇಕ ನಂದಿಸಲಾಗಿದ್ದರೂ ಅಲ್ಲಲ್ಲಿ ಕೆಲವು ಕಡೆ ಹೊಗೆ ಕಾಣಿಸಿಕೊಳ್ಳುತ್ತಿದ್ದು ಆಗ್ನಿಶಾಮಕ ಸಿಬ್ಬಂದಿಯನ್ನು ಬೆಂಕಿಯ ಬಗ್ಗೆ ನಿಗಾ ವಹಿಸಿದ್ದಾರೆ.

ಕಾರ್ಯಾಚರಣೆ ಶನಿವಾರ ರಾತ್ರಿಯಿಂದ ಸ್ಥಗಿತಗೊಂಡಿದ್ದು ಇಲ್ಲಿಯವರೆಗೆ ಹೊಗೆ ಬಿಟ್ಟರೆ ಎಲ್ಲಿಯೂ ಬೆಂಕಿ ಕಾಣಿಸಿಕೊಂಡಿಲ್ಲ. ಸಿಬ್ಬಂದಿ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿರುತ್ತದೆ ಕೆರೆಯಂಚಿನ ಸುಮಾರು 70 ಎಕರೆ ಜಾಗದಲ್ಲಿ ಹೂಳು ತುಂಬಿಕೊಂಡಿದ್ದು ತ್ಯಾಜ್ಯಕ್ಕೆ ಹೊತ್ತಿಕೊಂಡ ಬೆಂಕಿ, ಇಡೀ ಕೆರೆಯನ್ನೇ ಸುಟ್ಟಿದ್ದು ತಕ್ಷಣದಿಂದಲೇ ಹೂಳು ತೆರವುಗೊಳಿಸುವ ಕಾಮಗಾರಿ ಕೈಗೊಳ್ಳಬೇಕು ಎಂದಿದ್ದಾರೆ.

ಮೇಲ್ಭಾಗದ ಬೆಂಕಿ ನಂದಿಸಿದ್ದೇವೆ ಹೊರತು, ತಳಭಾಗದ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.ಕೆರೆಯ ಆಳದಲ್ಲಿ ಬೆಂಕಿ ಹಾಗೆಯೇ ಇರುವ ಸಾಧ್ಯತೆಯೂ ಇದೆ. ಹೀಗಾಗಿ ಆತಂಕ ಇದ್ದೇ ಇದೆ ಎಂದು ಹೇಳಿದ್ದಾರೆ.

ಆಗ್ನಿ ಶಾಮಕ ದಳದ ಕಾರ್ಯಾಚರಣೆ ವೇಳೆ ಅಗೆದಷ್ಟು ಗಾಜಿನ ಬಾಟಲಿಗಳು,ಕೊಳೆತ ತ್ಯಾಜ್ಯ, ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರಾಣಿಗಳ ಕಳೇಬರ ಕೈಗೆ ಸಿಕ್ಕವು. ಕಾಲಿಟ್ಟಲೆಲ್ಲ ಕೆಂಡ ತುಳಿದ ಅನುಭವ ಸಿಬ್ಬಂದಿಗೆ ಆಗಿದ್ದು ಗುದ್ದಲಿ, ಹಾರೆಯಂಥ ಹಲವು ಸಲಕರಣೆಗಳನ್ನು ಹಿಡಿದು ಕೆರೆಯಲ್ಲಿದ್ದ ಹೂಳು ತೆಗೆದಿದ್ದೇವೆ. ಕೆಲ ನಿಮಿಷದಲ್ಲೇ ಆ ಸಲಕರಣೆಗಳೂ ಬಿಸಿಯಾದವು. ಹಿಡಿದುಕೊಳ್ಳಲೂ ಆಗಲಿಲ್ಲ. ಅಷ್ಟು ಕಾವು ಹೂಳಿನಲ್ಲಿತ್ತು ಎಂದು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News