ಸಯೀದ್ ದಿಗ್ಬಂಧನ ಪರಿಶೀಲನೆ: ಈ ವಾರ ಪಾಕ್‌ಗೆ ವಿಶ್ವಸಂಸ್ಥೆ ತಂಡ

Update: 2018-01-21 16:37 GMT

ಇಸ್ಲಾಮಾಬಾದ್, ಜ. 21: ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಫೀಝ್ ಸಯೀದ್ ಮತ್ತು ಆತನೊಂದಿಗೆ ನಂಟು ಹೊಂದಿರುವ ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪಾಕಿಸ್ತಾನದ ಮೇಲೆ ಜಾಗತಿಕ ಒತ್ತಡ ಹೆಚ್ಚುತ್ತಿರುವಂತೆಯೇ, ಭಯೋತ್ಪಾದಕನ ವಿರುದ್ಧ ವಿಶ್ವಸಂಸ್ಥೆ ವಿಧಿಸಿರುವ ದಿಗ್ಬಂಧನಗಳನ್ನು ಪಾಕಿಸ್ತಾನ ಹೇಗೆ ಜಾರಿಗೊಳಿಸುತ್ತಿದೆ ಎನ್ನುವುದನ್ನು ಪರಿಶೀಲಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತಂಡವೊಂದು ಈ ವಾರ ಪಾಕ್ ಗೆ ತೆರಳಲಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ದಿಗ್ಬಂಧನ ಜಾರಿ ಪರಿಶೀಲನಾ ತಂಡದ ಎರಡು ದಿನಗಳ ಪಾಕಿಸ್ತಾನ ಭೇಟಿಯು ಗುರುವಾರ ಆರಂಭಗೊಳ್ಳಲಿದೆ.

ಸಯೀದ್ ಮತ್ತು ಅವನೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ವಿಧಿಸಲಾಗಿರುವ ದಿಗ್ಬಂಧನಗಳನ್ನು ಪಾಕಿಸ್ತಾನ ಸರಿಯಾಗಿ ಜಾರಿಗೊಳಿಸುತ್ತಿಲ್ಲ ಎಂಬ ಭಾರತ ಮತ್ತು ಅಮೆರಿಕಗಳ ಆರೋಪಗಳ ಹಿನ್ನೆಲೆಯಲ್ಲಿ ಈ ಭೇಟಿ ನಡೆಯುತ್ತಿದೆ.

ಆದಾಗ್ಯೂ, ಇದು ಸಾಮಾನ್ಯ ಭೇಟಿಯಾಗಿದೆ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳಿದ್ದಾರೆ.

ಸಯೀದ್‌ನನ್ನು 2008 ಡಿಸೆಂಬರ್‌ನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯ ಸಂಖ್ಯೆ 1267ರಲ್ಲಿ ಸೇರಿಸಲಾಗಿತ್ತು.

ಜಮಾಅತುದಅವಾ ಸಂಘಟನೆಯ ಮುಖ್ಯಸ್ಥನೂ ಆಗಿರುವ ಸಯೀದ್‌ನನ್ನು ಪಾಕಿಸ್ತಾನ ಕಳೆದ ವರ್ಷದ ನವೆಂಬರ್‌ನಲ್ಲಿ ಗೃಹಬಂಧನದಿಂದ ಬಿಡುಗಡೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News