ಅಮೆರಿಕದಲ್ಲಿ ಸಂಪೂರ್ಣ ಅವ್ಯವಸ್ಥೆ: ಟ್ರಂಪ್ ವಿರುದ್ಧ ಬೀದಿಗಿಳಿದ ಮಹಿಳೆಯರು

Update: 2018-01-21 16:42 GMT

ವಾಶಿಂಗ್ಟನ್, ಜ. 21: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿದ ದಿನವಾದ ಶನಿವಾರ ದೇಶಾದ್ಯಂತ ಅವ್ಯವಸ್ಥೆ ತಲೆದೋರಿದೆ. ಸರಕಾರಿ ಯಂತ್ರ ಸ್ಥಗಿತಗೊಂಡ ವಿಷಯದಲ್ಲಿ ಒಂದೆಡೆ ಸರಕಾರ ಮತ್ತು ಪ್ರತಿಪಕ್ಷಗಳು ಪರಸ್ಪರ ಕಚ್ಚಾಡಿದರೆ, ಇನ್ನೊಂದೆಡೆ ದೇಶಾದ್ಯಂತ ಟ್ರಂಪ್ ವಿರೋಧಿ ಪ್ರತಿಭಟನೆಗಳು ನಡೆದವು.

ಶನಿವಾರ ಇತರ ಕೇಂದ್ರ ಸರಕಾರಿ ಕಚೇರಿಗಳಂತೆ ಪ್ರಸಿದ್ಧ ‘ಸ್ವಾತಂತ್ರ್ಯದ ಪ್ರತಿಮೆ’ಯನ್ನೂ ಮುಚ್ಚಲಾಗಿತ್ತು. ಆದರೆ, ಸರಕಾರಿ ಬಂದ್‌ನ ಪೂರ್ಣ ಪರಿಣಾಮ ಸೋಮವಾರವಷ್ಟೆ ಅರಿವಿಗೆ ಬರುತ್ತದೆ. ಸೋಮವಾರ ಲಕ್ಷಾಂತರ ಸರಕಾರಿ ಸೈನಿಕರು ಸಂಬಳವಿಲ್ಲದೆ ಮನೆಯಲ್ಲೇ ಕುಳಿತುಕೊಳ್ಳಬೇಕಾಗುತ್ತದೆ.

ಆದರೆ, ಈ ಸಾಧ್ಯತೆಯನ್ನು ನಿವಾರಿಸಲು ರಿಪಬ್ಲಿಕನ್ ಸೆನೆಟರ್ ಮಿಚ್ ಮೆಕ್‌ಕಾನೆಲ್ ಶನಿವಾರ ರಾತ್ರಿ ಪ್ರಯತ್ನಿಸಿದರು. ಸರಕಾರಿ ಉದ್ಯೋಗಿಗಳು ಕೆಲಸ ಮಾಡುವಂತಾಗಲು ನಿಧಿ ಪೂರೈಸುವ ಕರಾರೊಂದಕ್ಕೆ ಅನುಮೋದನೆ ಪಡೆಯಲು ಅವರು ಯತ್ನಿಸಿದರು. ಅವರ ಮಸೂದೆಗೆ ರವಿವಾರ ತಡ ರಾತ್ರಿ ಅಂಗೀಕಾರ ದೊರೆಯುವ ಸಾಧ್ಯತೆಯಿದೆ.

ಡೆಮಾಕ್ರಟಿಕ್-ರಿಪಬ್ಲಿಕ್ ಹಗ್ಗ ಜಗ್ಗಾಟ

ಸರಕಾರದ ದೈನಂದಿನ ಕಾರ್ಯಗಳನ್ನು ನಡೆಸಲು ಅಗತ್ಯವಿರುವ ನಿಧಿಯನ್ನು ಬಿಡುಗಡೆಗೊಳಿಸಲು ಕಾಂಗ್ರೆಸ್ ನಿರಾಕರಿಸಿದ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಶನಿವಾರ ಮತ್ತು ರವಿವಾರ ಸರಕಾರ ಬಂದ್ ಆಗಿದೆ. ಯಾವುದೇ ಸರಕಾರಿ ಕಚೇರಿಗಳು ತೆರದಿಲ್ಲ. ಸೋಮವಾರದ ಪರಿಸ್ಥಿತಿ ಹೇಗಿರಬಹುದು ಎನ್ನುವ ಕಲ್ಪನೆ ಯಾರಿಗೂ ಇಲ್ಲ. ಸೋಮವಾರ ಲಕ್ಷಾಂತರ ಸರಕಾರಿ ಉದ್ಯೋಗಿಗಳು ಕಚೇರಿಗೆ ಮರಳಲಿದ್ದಾರೆ. ಆಗಿನ ಪರಿಸ್ಥಿತಿ ಏನಿರುತ್ತದೆ ಎನ್ನುವುದು ಯಾರಿಗೂ ಗೊತ್ತಿಲ್ಲ.

 ವಲಸಿಗರನ್ನು ವಾಪಸ್ ಕಳುಹಿಸಬಾರದು ಎಂಬುದಾಗಿ ಒತ್ತಾಯಿಸಿ ಪ್ರತಿಪಕ್ಷದ ಡೆಮಾಕ್ರಟಿಕ್ ಸದಸ್ಯರು ರಿಪಬ್ಲಿಕನ್ ಪಕ್ಷದ ಸರಕಾರದ ಹಣಕಾಸು ಬಿಲ್‌ಗಳಿಗೆ ಅನುಮೋದನೆ ನೀಡಿಲ್ಲ. ಹಾಗಾಗಿ ಸರಕಾರಿ ಯಂತ್ರ ನಡೆಯಲು ಹಣವಿಲ್ಲದೆ ಮುಚ್ಚಿದೆ.

ಅಮೆರಿಕದಾದ್ಯಂತ ಪ್ರತಿಭಟನೆ

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಹಿಳೆಯರು ಅಧ್ಯಕ್ಷರ ವಿರುದ್ಧ ಅಮೆರಿಕದಾದ್ಯಂತ ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಹಿಳೆಯರು ಅಧ್ಯಕ್ಷರನ್ನು ವಿರೋಧಿಸಲು ಗುಲಾಬಿ ಬಣ್ಣದ ಟೊಪ್ಪಿಗಳನ್ನು ಧರಿಸಿ ಮೆರವಣಿಗೆಯಲ್ಲಿ ಸಾಗಿದರು. ಇದು ಮಹಿಳೆಯರು ಅಧ್ಯಕ್ಷರ ವಿರುದ್ಧ ನಡೆಸುತ್ತಿರುವ 2ನೆ ಪ್ರತಿಭಟನೆಯಾಗಿದೆ.

ವಾಶಿಂಗ್ಟನ್, ನ್ಯೂಯಾರ್ಕ್, ಶಿಕಾಗೊ, ಡೆನ್ವರ್, ಬಾಸ್ಟನ್, ಲಾಸ್ ಏಂಜಲಿಸ್ ಮತ್ತು ಇತರ ನಗರಗಳಲ್ಲಿ ಲಕ್ಷಾಂತರ ಮಹಿಳಾ ಪ್ರತಿಭಟನಕಾರರು ಜಮಾಯಿಸಿದರು. ಹೆಚ್ಚಿನವರು ಪ್ರಸಿದ್ಧ ಗುಲಾಬಿ ಟೊಪ್ಪಿಗಳನ್ನು ಧರಿಸಿದರು.

ತಾನು ಯಾವುದೇ ಪ್ರತಿಕೂಲ ಪರಿಣಾಮವಿಲ್ಲದೆ ಮಹಿಳೆಯರ ಮೇಲೆ ಕೈಹಾಕಬಲ್ಲೆ ಎಂಬುದಾಗಿ ಟ್ರಂಪ್ ಹೇಳುತ್ತಿರುವ ವಿಡಿಯೋವೊಂದು ಬಹಿರಂಗಗೊಂಡ ಬಳಿಕ, ಮಹಿಳೆಯರು ಅವರ ವಿರುದ್ಧ ಗುಲಾಬಿ ಟೊಪ್ಪಿಗಳನ್ನು ಧರಿಸಿ ನೂತನ ವಿಧಾನದಲ್ಲಿ ಪ್ರತಿಭಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News