ಕಾಬೂಲ್ ಹೊಟೇಲ್‌ಗೆ ನುಗ್ಗಿದ 4 ಉಗ್ರರ ಹತ್ಯೆ

Update: 2018-01-21 16:46 GMT

ಕಾಬೂಲ್ (ಅಫ್ಘಾನಿಸ್ತಾನ), ಜ. 21: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಐಶಾರಾಮಿ ಹೊಟೇಲೊಂದಕ್ಕೆ ಶನಿವಾರ ನುಗ್ಗಿದ ಭಯೋತ್ಪಾದಕರು ಓರ್ವ ವಿದೇಶಿ ಸೇರಿದಂತೆ ಕನಿಷ್ಠ 6 ಮಂದಿಯನ್ನು ಹತ್ಯೆಮಾಡಿದ್ದಾರೆ.

ಅದೇ ವೇಳೆ, ಅಫ್ಘಾನ್ ಭದ್ರತಾ ಪಡೆಗಳು ಹೊಟೇಲ್‌ಗೆ ನುಗ್ಗಿದ ಎಲ್ಲ ನಾಲ್ವರು ಭಯೋತ್ಪಾದಕರನ್ನು ಕೊಂದು 18 ಗಂಟೆಗಳ ಮುತ್ತಿಗೆಯನ್ನು ರವಿವಾರ ಕೊನೆಗೊಳಿಸಿದ್ದಾರೆ.ಇಬ್ಬರು ಉಗ್ರರನ್ನು ಶನಿವಾರ ರಾತ್ರಿಯೇ ಕೊಲ್ಲಲಾಗಿತ್ತು.

ಉಗ್ರ ದಾಳಿಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. 41 ವಿದೇಶೀಯರು ಸೇರಿದಂತೆ 153 ಮಂದಿಯನ್ನು ಹೊಟೇಲ್‌ನಿಂದ ತೆರವುಗೊಳಿಸಲಾಗಿದೆ.

ರವಿವಾರ ಹೊಟೇಲ್‌ನಿಂದ ದಟ್ಟ ಹೊಗೆ ಹೊರಬರುತ್ತಿದ್ದಂತೆಯೇ, ಅಮೆರಿಕ ಸೇನೆಯ ಹಲವಾರು ವಾಹನಗಳು ಹೊಟೇಲ್ ಸಮೀಪ ಗಸ್ತು ನಡೆಸುತ್ತಿದ್ದವು.

ಬೆಟ್ಟದ ತುದಿಯಲ್ಲಿರುವ ಆರು ಮಹಡಿಗಳ ಇಂಟರ್ ಕಾಂಟಿನೆಂಟಲ್ ಹೊಟೇಲ್ ಮೇಲೆ ನಡೆದ ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ.ಶನಿವಾರ ರಾತ್ರಿ ವಿಶೇಷ ಪಡೆಗಳನ್ನು ಹೆಲಿಕಾಪ್ಟರ್ ಮೂಲಕ ಹೊಟೇಲ್‌ನ ಛಾವಣಿಯಲ್ಲಿ ಇಳಿಸಲಾಗಿತ್ತು.

ನಾಲ್ವರು ಬಂದೂಕುಧಾರಿಗಳು ಶನಿವಾರ ರಾತ್ರಿ ಗುಂಡು ಹಾರಿಸುತ್ತಾ ಹೊಟೇಲ್‌ಗೆ ನುಗ್ಗಿದರು ಹಾಗೂ ಹತ್ತಾರು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡರು ಎಂದು ಆಂತರಿಕ ಭದ್ರತೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಕಾಬೂಲ್‌ನಲ್ಲಿ ಹೊಟೇಲ್ ಮೇಲೆ ದಾಳಿ ನಡೆಯಬಹುದು ಎಂಬುದಾಗಿ ಅಮೆರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ದಾಳಿಯಾಗಿದೆ.ದಾಳಿ ನಡೆಯುವಾಗ ಹೊಟೇಲ್‌ನ ಒಳಗೆ ಎಷ್ಟು ಜನರಿದ್ದರು ಎನ್ನುವುದು ತಿಳಿದಿಲ್ಲ.

ಬೆಡ್‌ಶೀಟ್‌ಗಳ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದರು

 ದಾಳಿಗೊಳಗಾದ ಹೊಟೇಲ್‌ನ ಕೋಣೆಗಳಿಂದ ಜನರು ಬೆಡ್‌ಶೀಟ್‌ಗಳನ್ನು ಬಳಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಬಗ್ಗೆ ವರದಿಯಾಗಿದೆ. ಈ ಸಾಹಸಕ್ಕೆ ಮುಂದಾಗಿ ಓರ್ವ ವ್ಯಕ್ತಿ ಹಿಡಿತ ಕಳೆದುಕೊಂಡು ಕೆಳಗೆ ಬೀಳುವ ದೃಶ್ಯವನ್ನು ಸ್ಥಳೀಯ ಟೆಲಿವಿಶನ್ ಚಾನೆಲೊಂದು ಪ್ರಸಾರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News