ಮೀನುಗಾರರ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಯತ್ನ: ಸಚಿವ ಪ್ರಮೋದ್
ಮಲ್ಪೆ, ಜ.22: ಮೀನುಗಾರಿಕೆಗೆ ಸಂಬಂಧಿಸಿ ಮಲ್ಪೆಯ ಮೀನುಗಾರರ ಮಧ್ಯೆ ಉಂಟಾಗಿರುವ ಸಂಘರ್ಷವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಜ.24ರಂದು ಮಲ್ಪೆ ಮೀನುಗಾರಿಕಾ ಕಚೇರಿಯಲ್ಲಿ ಸಭೆ ಕರೆಯಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಮಲ್ಪೆ ಬಂದರಿನ ಯಾಂತ್ರಿಕ ಡಿಸೇಲ್ ಬಂಕ್ ಸಮೀಪ ನಿರ್ಮಿಸಲಾದ ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಳೆದ ಕೆಲ ದಿನಗಳಿಂದ ಅನಧಿಕೃತ ಮೀನುಗಾರಿಕೆ ಹಾಗೂ ಲೈಟ್ ಮೀನು ಗಾರಿಕೆ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದು ಮೀನುಗಾರರ ನಡುವೆ ವೈಮನಸ್ಸು ಉಂಟು ಮಾಡಿದೆ. ಒಗ್ಗಟ್ಟಿನಲ್ಲಿರಬೇಕಾದ ಮೀನುಗಾರರೇ ಬಿಕ್ಕಟ್ಟು ಮಾಡಿಕೊಂಡು ಸಮಸ್ಯೆ ತಂದುಕೊಳ್ಳುವುದು ಸರಿಯಲ್ಲ. ಆದುದರಿಂದ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದರು.
ಮಲ್ಪೆ ಬಂದರಿನಲ್ಲಿ ದಿನೇ ದಿನೇ ಬೋಟುಗಳ ದಟ್ಟಣೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಮಲ್ಪೆ ಬಂದರಿನ ನಾಲ್ಕನೆ ಹಂತದ ಅಭಿವೃದ್ಧಿ ಕಾಮಗಾರಿ ಪಡುಕರೆ ಜಟ್ಟಿ ನಿರ್ಮಾಣಕ್ಕೆ ನಬಾರ್ಡ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ 10 ಕೋಟಿ ರೂ. ಮಂಜೂರಾಗಲಿದೆ ಎಂದು ಅವರು ತಿಳಿಸಿದರು.
ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಲ್ಪೆ ಪರ್ಸೀನ್ ಮೀನುಗಾರರ ಸಂಘದ ಅಧ್ಯಕ್ಷ ಯಶೋಧರ ಅಮೀನ್, ಗೌರವಾಧ್ಯಕ್ಷ ಗುರುದಾಸ್ ಬಂಗೇರ, ಉದ್ಯಮಿ ಹರಿಯಪ್ಪ ಕೋಟ್ಯಾನ್, ಗೀತಾನಂದ ಫೌಂಡೇಶನ್‌ನ ಪ್ರವರ್ತಕ ಆನಂದ ಸಿ.ಕುಂದರ್, ಮಲ್ಪೆ ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಾಧು ಸಾಲ್ಯಾನ್, ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್, ಉದ್ಯಮಿ ಆನಂದ ಪಿ.ಸುವರ್ಣ, ಒಣ ಮೀನು ಮಹಿಳಾ ಸಂಘದ ಜಲಜ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.