ಉಡುಪಿ: ಜಾಗೃತ ಸಮಿತಿಗೆ ಜಯನ್ ಮಲ್ಪೆಆಯ್ಕೆ
Update: 2018-01-22 19:22 IST
ಉಡುಪಿ, ಜ.22: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉಡುಪಿ ಜಿಲ್ಲಾ ಮಟ್ಟದ ಅಧಿಕಾರೇತರ ಜಾಗೃತ ಸಮಿತಿಯ ಸದಸ್ಯರಾಗಿ ದಲಿತ ಚಿಂತಕ ಹಾಗೂ ಹೋರಾಟಗಾರ ಜಯನ್ ಮಲ್ಪೆ ಆಯ್ಕೆಯಾಗಿದ್ದಾರೆ.
ಈ ಜಾಗೃತಿ ಸಮಿತಿಗೆ ಜಯನ್ ಮಲ್ಪೆ ಸೇರಿದಂತೆ ಕುಂದಾಪುರದ ಸುಬ್ರಹ್ಮಣ್ಯ ಪಡುಕೋಣೆ, ಅಬ್ದುಲ್ ಅಝೀಝ್ ಹೆಜಮಾಡಿ, ಮೇಟಿ ಮುದಿಯಪ್ಪ, ಡಾ.ಜಯಪ್ರಕಾಶ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ಕನ್ನಡ ಭಾಷೆಯನ್ನು ರಾಜ್ಯ ಹಾಗೂ ಜಿಲ್ಲೆಯ ಆಡಳಿತದ ಎಲ್ಲಾ ಮಟ್ಟದಲ್ಲಿ ಅನುಷ್ಠಾನವಾಗುತ್ತಿರುವ ಬಗ್ಗೆ ಪರಿಶೀಲನೆ, ಕನ್ನಡ ಭಾಷೆ ಮತ್ತು ಕನ್ನಡ ಜನರ ಹಿತಾಸಕ್ತಿಯನ್ನು ಸಂರಕ್ಷಿಸುವ ಸಲುವಾಗಿ ಈ ನೇಮಕ ಮಾಡಲಾಗಿದೆ. ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ಜಯನ್ ಮಲ್ಪೆ, ಬರೆದಿರುವ ಮೀನು ಕ್ಷಾಮ ದಿಕ್ಕೆಟ್ಟ ಕರಾವಳಿ ಎಂಬ ಸಮೀಕ್ಷೆ ಬರಹಕ್ಕೆ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟ 2001ರಲ್ಲಿ ವಡ್ಡರ್ಸೆ ರಘುರಾವು ಶಟ್ಟಿ ಪ್ರಶಸ್ತಿ ನೀಡಿ ಗೌರವಿಸಿತ್ತು.