×
Ad

ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ಸಂಸ್ಥೆಗಳು ಭಾಗಿ: ಸಚಿವ ಖಾದರ್

Update: 2018-01-22 19:44 IST

ಮಂಗಳೂರು, ಜ.22: ದ.ಕ. ಜಿಲ್ಲಾಡಳಿತ ವತಿಯಿಂದ ಫೆ.17ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ ಉದ್ಯೋಗ ಮೇಳದಲ್ಲಿ 150ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸಲಿವೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ ಮೊದಲ ಬಾರಿಗೆ ಇಂಜಿನಿಯರಿಂಗ್ ಹೊರತುಪಡಿಸಿ ಇತರೆ ಸಾಮಾನ್ಯ ಶೈಕ್ಷಣಿಕ ಅರ್ಹತೆಗಳಿಗೆ ಸಂಬಂಧಪಟ್ಟ ಉದ್ಯೋಗಿಗಳ ನೇಮಕಾತಿಗೆ ಈ ಮೇಳದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಲು ವೆಬ್‌ಸೈಟ್ ತೆರೆಯಲಾಗಿದೆ ಎಂದರು.

ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಸಾಕಷ್ಟು ಉನ್ನತ ಸಂಸ್ಥೆಗಳು ಆಸಕ್ತಿ ತೋರಿವೆ. ಉದ್ಯೋಗ ಮೇಳಕ್ಕೆ ಎಷ್ಟು ಜನ ಬರುತ್ತಿದ್ದಾರೆ ಎಂಬುದು ಮುಖ್ಯವಲ್ಲ. ಎಷ್ಟು ಜನ ಉದ್ಯೋಗ ಪಡೆದುಕೊಂಡರು ಎಂಬುದು ಮುಖ್ಯವಾಗುತ್ತದೆ. ಬಂದಂತಹ ಎಲ್ಲ ಉದ್ಯೋಗ ಆಕಾಂಕ್ಷಿಗಳಿಗೆ ಲಾಭವಾಗಬೇಕು. ಉದ್ಯೋಗ ಮೇಳದಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ಕೂಡಾ ನೀಡಲಾಗುವುದು ಎಂದು ಸಚಿವ ಖಾದರ್ ಹೇಳಿದರು.

ಉದ್ಯೋಗ ಮೇಳದ ಸಂಯೋಜಕ ವಿವೇಕ್ ಆಳ್ವ ಮಾತನಾಡಿ ಈಗಾಗಲೇ ಪದವಿ, ಸ್ನಾತಕೋತ್ತರ, ನರ್ಸಿಂಗ್, ಐಟಿಐ, ಹೋಟೆಲ್ ಮ್ಯಾನೆಜ್‌ಮೆಂಟ್ ಮತ್ತು ಡಿಪ್ಲೊಮಾ ಕೋರ್ಸ್ ಪೂರ್ಣಗಳಿಸಿರುವ ಉದ್ಯೋಗ ಆಕಾಂಕ್ಷಿಗಳಿಗಾಗಿ ಈ ಉದ್ಯೋಗ ಮೇಳ ನಡೆಯಲಿದೆ. ಭಾಗವಹಿಸುವ 150 ಕಂಪೆನಿಗಳ ಪೈಕಿ 6 ಅಂತಾರಾಷ್ಟ್ರೀಯ ಕಂಪೆನಿಗಳು ಇವೆ ಎಂದರು.
ಉದ್ಯೋಗ ಮೇಳಕ್ಕಾಗಿ ಈಗಾಗಲೇ ಮಂಗಳೂರು ವಿಶ್ವ ವಿದ್ಯಾನಿಲಯದ 169 ಕೊಠಡಿಗಳನ್ನು ನಿಗದಿಪಡಿಸಲಾಗಿದೆ. ಇದಲ್ಲದೆ ಇನ್ನಿತರ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಕಾಲೇಜಿನ ಹಳೆ ವಿದ್ಯಾರ್ಥಿಗಳು ಈ ಮೇಳದ ಸದುಪಯೋಗ ಪಡೆದುಕೋಳ್ಳಬಹುದು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ವಿವಿ ಕುಲಸಚಿವ ಪ್ರೊ. ಬಿ.ಎಸ್. ನಾಗೇಂದ್ರ ಪ್ರಕಾಶ್, ಮೌಲ್ಯಮಾಪನ ಕುಲಸಚಿವ ಡಾ.ಎ.ಎಂ. ಖಾನ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News