×
Ad

ಜ.23ರಿಂದ ಪ್ರಪ್ರಥಮ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷಾ ಸಮ್ಮೇಳನ

Update: 2018-01-22 20:04 IST

ಹೊಸದಿಲ್ಲಿ, ಜ.22: ಪ್ರಪ್ರಥಮ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನವು ಜ.23ರಿಂದ ತಿರುವನಂತಪುರಂನಲ್ಲಿ ಆರಂಭಗೊಳ್ಳಲಿದೆ ಎಂದು ಸರಕಾರ ಸೋಮವಾರ ತಿಳಿಸಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಜಲಸಂಪನ್ಮೂಲ ಕೇಂದ್ರ ರಾಜ್ಯ ಸಚಿವ ಅರ್ಜುನ್ ರಾಮ್ ಮೆಘಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಬೃಹತ್ ಅಣೆಕಟ್ಟುಗಳ ಸುರಕ್ಷತೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಟ್ರೇಲಿಯ, ಸ್ಪೈನ್, ಸ್ವಿಝರ್‌ಲ್ಯಾಂಡ್, ಅಮೆರಿಕಾ ಸೇರಿದಂತೆ 20ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಜಲ ಆಯೋಗದ ನಿರ್ದೇಶಕರಾದ (ಅಣೆಕಟ್ಟು ಸುರಕ್ಷತೆ) ಪ್ರಮೋದ್ ನಾರಾಯಣ್ ತಿಳಿಸಿದ್ದಾರೆ.

ಅಣೆಕಟ್ಟು ಪುನರ್ವಸತಿ ಮತ್ತು ಅಭಿವೃದ್ಧಿ ಯೋಜನೆಯಡಿ (ಡಿಆರ್‌ಐಪಿ) ಯಲ್ಲಿ ಅಭಿವೃದ್ಧಿಪಡಿಸಲಾದ ಏಳು ಅಣೆಕಟ್ಟು ಸುರಕ್ಷತಾ ಕೈಪಿಡಿಗಳನ್ನು ಸಮ್ಮೇಳನದಲ್ಲಿ ಅನುಷ್ಟಾನಕ್ಕಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡಿಆರ್‌ಐಪಿ ಮೂಲಕ ಕೇಂದ್ರವು ಏಳು ರಾಜ್ಯಗಳಲ್ಲಿ ಒತ್ತಡವನ್ನು ಅನುಭವಿಸುತ್ತಿರುವ 223 ಬೃಹತ್ ಅಣೆಕಟ್ಟುಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ಸಮ್ಮೇಳನದಲ್ಲಿ ಅಣೆಕಟ್ಟು ಆರೋಗ್ಯ ಮತ್ತು ಪುನರ್ವಸತಿ ನಿಗಾವಣೆ ಅಪ್ಲಿಕೇಶನ್ (ಧರ್ಮ) ಅನ್ನು ಬಿಡುಗಡೆ ಮಾಡಲಾಗುವುದು. ಬೃಹತ್ ಅಣೆಕಟ್ಟುಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತವು ಚೀನಾ ಮತ್ತು ಅಮೆರಿಕಾದ ನಂತರ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಭಾರತದಲ್ಲಿ 5,254 ಕಾರ್ಯಾಚರಿಸುತ್ತಿರುವ ಬೃಹತ್ ಅಣೆಕಟ್ಟುಗಳಿದ್ದರೆ 447 ಬೃಹತ್ ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿವೆ. ಈ ಎಲ್ಲಾ ಅಣೆಕಟ್ಟುಗಳ ಒಟ್ಟಾರೆ ಸಾಮರ್ಥ್ಯ 283 ಬಿಲಿಯನ್ ಕ್ಯುಬಿಕ್ ಮೀಟರ್‌ಗಳಾಗಿವೆ.

ಭಾರತದ 80 ಶೇಕಡಾ ಬೃಹತ್ ಅಣೆಕಟ್ಟುಗಳು 25 ವರ್ಷಗಳಷ್ಟು ಹಳೆಯದಾಗಿದ್ದು, 213 ಬೃಹತ್ ಅಣೆಕಟ್ಟುಗಳ ನಿರ್ಮಾಣವಾಗಿ ಶತಮಾನವೇ ಕಳೆದಿದೆ. ಹಾಗಾಗಿ ಅವುಗಳ ಸುರಕ್ಷತಾ ಮಾನದಂಡಗಳು ಇಂದಿನ ಸುರಕ್ಷತಾ ನಿಯಮಗಳಿಗೆ ಸರಿಹೊಂದುವುದಿಲ್ಲ. ಇದರಿಂದಾಗಿ ಕೇಂದ್ರವು 2012ರಲ್ಲಿ ಡಿಆರ್‌ಐಪಿಯನ್ನು ಅನುಷ್ಟಾನಗೊಳಿಸಿತು ಎಂದು ಸರಕಾರದ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News