ವಿಟ್ಲ ಪರಿಸರದಲ್ಲಿ ಮತ್ತೆ ಸರಣಿ ಕಳವು: ದೂರು

Update: 2018-01-22 14:47 GMT

ಬಂಟ್ವಾಳ, ಜ. 22: ಕಚೇರಿ, ಅಂಗಡಿ ಹಾಗೂ ಹೊಟೇಲ್‌ವೊಂದರ ಕೋಣೆಗಳಿಗೆ ನುಗ್ಗಿದ ಕಳ್ಳರು ಸರಣಿ ಕಳ್ಳತನ ಮಾಡಿದ ಹಾಗೂ ಮಹಿಳೆಯೊಬ್ಬರ ಕುತ್ತಿಗೆಯಿಂದ ಸರ ಎಗರಿಸಿದ ಘಟನೆ ವಿಟ್ಲ ಪರಿಸರದಲ್ಲಿ ರವಿವಾರ ತಡರಾತ್ರಿ ನಡೆದಿದೆ.

ವಿಟ್ಲ ಮಹತೋಭಾರ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವದ ದಿನವಾದ ರವಿವಾರ ರಾತ್ರಿ, ಇಲ್ಲಿನ ವಿ.ಎಚ್ ಕಾಂಪ್ಲೆಕ್ಸ್‌ನಲ್ಲಿರುವ ವಕೀಲ ಉಮರ್ ಎಂಬವರ ಕಚೇರಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸೊತ್ತುಗಳಿಗಾಗಿ ಹುಡುಕಾಟ ನಡೆಸಿ, ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ತದನಂತರ ಪಕ್ಕದಲ್ಲಿರುವ ಹೊಟೇಲೊಂದಕ್ಕೆ ನುಗ್ಗಿದ ಕಳ್ಳರು, ಕ್ಯಾಶಿಯರ್‌ನಲ್ಲಿದ್ದ ನಗದು ದೋಚಿದ್ದಾರೆ. ಬಳಿಕ ವಿಟ್ಲದ ಮತ್ತೊಂದು ಹೊಟೇಲ್‌ನ ಸಿಬ್ಬಂದಿಯ ಕೋಣೆಗೆ ನುಗ್ಗಿದ ಕಳ್ಳರು, ನಾಲ್ಕು ಮೊಬೈಲ್‌ಗಳನ್ನು ಕಳವುಗೈದು ಪರಾರಿಯಾಗಿದ್ದಾರೆ. ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿವಾರ ರಾತ್ರಿ ಜಾತ್ರೋತ್ಸವಕ್ಕೆ ಆಗಮಿಸಿದ್ದ ಕೇಪು ಗ್ರಾಮದ ಮಹಿಳೆಯೊಬ್ಬರ ಕುತ್ತಿಗೆಯಿಂದ ಮೂರುವರೆ ಪವನ್ ತೂಕದ ಚಿನ್ನದ ಸರ ಎಗರಿಸಿದ ಘಟನೆಯೂ ನಡೆದಿದೆ.

ಈ ಸಂಬಂಧ ಮಹಿಳೆ ನೀಡಿರುವ ದೂರಿನಡಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News