ಪುತ್ತೂರು : ಗೌರವ ಧನ ನೀಡುವಂತೆ ಒತ್ತಾಯಿಸಿ ಅತಿಥಿ ಶಿಕ್ಷಕರಿಂದ ಪ್ರತಿಭಟನೆ

Update: 2018-01-22 15:16 GMT

ಪುತ್ತೂರು, ಜ. 22: ಶೈಕಣಿಕ ವರ್ಷದಲ್ಲಿ ಕಳೆದ 6 ತಿಂಗಳಿನಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರಿಗೆ ಗೌರವಧನ ನೀಡುವಂತೆ ಆಗ್ರಹಿಸಿ ಸೋಮವಾರ ಪುತ್ತೂರು ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ದುಡಿಯುತ್ತಿರುವ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರ ಸಂಘದ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಬಾಗ ಪ್ರತಿಭಟನೆ ನಡೆಸಿದರು.

ಸರ್ಕಾರದ ಆದೇಶದ ಮೇರೆಗೆ ಜುಲೈ 1ರಿಂದ ಕರ್ತವ್ಯಕ್ಕೆ ಹಾಜರಾಗಿ ಕಳೆದ 6 ತಿಂಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬರಲಾಗಿದ್ದರೂ ಈ ತನಕ ಗೌರವ ಧನ ನೀಡಲು ಕೆಲಸ ನಡೆದಿಲ್ಲ. ನಮ್ಮ ಸಮಸ್ಯೆಯನ್ನು ಕೇಳುವವರಿಲ್ಲ. ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ ಎಂದು ಅಳವತ್ತು ಕೊಂಡರು. ಜುಲೈನಿಂದ ಡಿಸೆಂಬರ್ ತನಕದ ಗೌರವಧನವನ್ನು ನೀಡದಿದ್ದಲ್ಲಿ, ಅದು ಸಿಗುವ ತನಕ ಇಲ್ಲಿಂದ ಕದಡುವುದಿಲ್ಲ ಎಂದು ಪಟ್ಟು ಹಿಡಿದು ಧರಣೆ ಕುಳಿತರು. ಗೌರವಧನವನ್ನು ಸರಿಯಾಗಿ ನೀಡುವ ಕೆಲಸವಾಗದಿದ್ದಲ್ಲಿ ಮುಂದಿನ ವರ್ಷ ಯಾರೂ ಕರ್ತವ್ಯಕ್ಕೆ ಹೋಗುವುದಿಲ್ಲ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮತನಾಡಿದ ತಾಲೂಕು ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷೆ ಚಿತ್ರಲೇಖಾ ಕೆ ಅವರು ಡಿಸೆಂಬರ್ ತನಕ ಗೌರವಧನದ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳುತ್ತಿದ್ದ ಅಧಿಕಾರಿಗಳು ಈಗ ತಾಂತ್ರಿಕ ದೋಷದ ನೆಪ ಹೇಳುತ್ತಿದ್ದಾರೆ. ಗೌರವಧನ ವಿಳಂಬದ ಕುರಿತು ಶಾಸಕರಿಗೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರು ಭರವಸೆ ನೀಡಿ 15 ದಿನಗಳು ಕಳೆದರೂ ನಮ್ಮ ಖಾತೆಗೆ ಗೌರವಧನ ಇನ್ನೂ ಜಮೆ ಆಗಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಭರವಸೆ ನಂಬಿ ಪ್ರತಿಭಟನೆಯನ್ನು ಮುಂದೂಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಮತ್ತು ಅಧಿಕಾರಿಗಳ ಸ್ಪಂದನೆ ಇಲ್ಲದ ಕಾರಣ ನಾವು ಬೀದಿಗಿಳಿಯುವುದು ಅನಿವಾರ್ಯವಾಯಿತು ಎಂದರು.

ಪ್ರತಿಭಟನೆಗೆ ಹಿಂದೂ ಸಂಘಟನೆಗಳ ಪ್ರಮುಖ ಅರುಣ್‌ಕುಮಾರ್ ಪುತ್ತಿಲ, ಯುವ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಶ್ರಫ್ ಕಲ್ಲೇಗ, ಎಸ್‌ಡಿಎಂಸಿ ಜಿಲ್ಲಾ ಒಕ್ಕೂಟದ ಅಧ್ಯಕ್ಷ ಇಸ್ಮಾಯಿಲ್ ನೆಲ್ಯಾಡಿ, ಎಸ್‌ಡಿಎಂಸಿ ತಾಲೂಕು ಸಮನ್ವಯ ಸಮಿತಿಯ ಅಧ್ಯಕ್ಷ ಮೋಯ್ದೀನ್‌ಕುಟ್ಟಿ, ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲುಂಬುಡ ಅವರು ಮಾತನಾಡಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಯತೀಶ್ ಕುಮಾರ್, ಉಪಾಧ್ಯಕ್ಷೆ ಹವೀನಾ, ಜೊತೆ ಕಾರ್ಯದರ್ಶಿ ದೇವಿಕಾ ಯು.ಪಿ,ಸಂಘಟನಾ ಕಾರ್ಯದರ್ಶಿಗಳಾದ ದೀಪಿಕಾ, ಧನಲಕ್ಷ್ಮೀ , ಮಮತಾ,ಸಂಧ್ಯಾ, ಪ್ರೀತಾ, ಜಯಪ್ರಭಾ, ರಾಧಿಕಾ, ಮಂಜುಳಾ, ನಳಿನಿ, ದಯಾಮಣಿ ಮತ್ತಿತರರು ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕರು ಪ್ರತಿಭಟನೆ ಆರಂಭಿಸುತ್ತಿದ್ದಂತೆಯೇ ಅವರ ಜೊತೆ ಮಾತುಕತೆ ನಡೆಸಿದ ಕ್ಷೇತ್ರ ಶಿಕ್ಷಣ ಇಲಾಖೆಯ ಸಹಾಯಕ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಅವರು ಒಂದು ದಿನದೊಳಗಾಗಿ ಗೌರವಧನ ಪಾವತಿಯ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು. ಆದರೆ ಅವರ ಭರವಸೆಯನ್ನು ಲೆಕ್ಕಿಸದೆ ಪ್ರತಿಭಟನೆ ಮುಂದುವರಿಸಿದ ಅತಿಥಿ ಶಿಕ್ಷಕರು 6 ತಿಂಗಳ ಗೌರವಧನ ತಮ್ಮ ಬ್ಯಾಂಕ್ ಅಕೌಂಟ್‌ಗೆ ಜಮೆಯಾಗುವ ತನಕ ಇಲ್ಲಿಂದ ಕಡದುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಕುಳಿತರು.

ಪ್ರತಿಭಟನೆ ನಿರತ ಅತಿಥಿ ಶಿಕ್ಷಕರು ತಮ್ಮ ಪಟ್ಟು ಸಡಿಲಿಸದೆ ಪ್ರತಿಭಟನೆ ಮುಂದುವರಿಸಿದ ಫಲವಾಗಿ ಎಚ್ಚೆತ್ತುಕೊಂಡ ಅಧಿಕಾರಿಗಳು 1.30ರ ವೇಳೆಗೆ ಅತಿಥಿ ಶಿಕ್ಷಕರ ಖಾತೆಗೆ 6 ತಿಂಗಳ ಪೈಕಿ 5 ತಿಂಗಳ ಗೌರವಧನ ಜಮೆ ಮಾಡುವ ಮೂಲಕ ಪ್ರತಿಭಟನೆಗೆ ತೆರೆ ಎಳೆಯುವ ಕೆಲಸ ಮಾಡಿದರು. ಗೌರವ ಧನ ಬ್ಯಾಂಕ್ ಅಕೌಂಟ್‌ಗೆ ಜಮೆ ಆಗಿರುವುದು ಖಚಿತವಾದ ಬಳಿಕವಷ್ಟೇ ಅತಿಥಿ ಶಿಕ್ಷಕರು ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News