ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ: ಆಳ್ವಾಸ್ ತಂಡ ಪ್ರಥಮ

Update: 2018-01-22 16:08 GMT

ಭಟ್ಕಳ, ಜ. 22: ಸತತ ಮೂರು ದಿನಗಳ ಕಾಲ ಕಟ್ಟೇವೀರ ಸ್ಪೋಟ್ಸ ಕ್ಲಬ್ ಮುಠ್ಠಳ್ಳಿ, ರಂಜನ ಇಂಡೆನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದಲ್ಲಿ ನಡೆದ ರಂಜನ ಇಂಡೆನ್-2018 ಪುರುಷರಿಗಾಗಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಪ್ರಥಮ ಸ್ಥಾನವನ್ನು ಮೂಡಬಿದಿರೆಯ ಆಳ್ವಾಸ್ ತಂಡವೂ ತನ್ನ ಮುಡಿಗೇರಿಸಿಕೊಂಡಿತು.

ಒಟ್ಟು 16 ತಂಡಗಳ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಮೊದಲ ಸೆಮಿಫೈನಲ್‌ನಲ್ಲಿ ಕೋಲಾ ಬೆಂಗಳೂರು ತಂಡ ಹಾಗೂ ಆಳ್ವಾಸ ತಂಡವೂ ಸೆಣಸಾಡಿ ಆಳ್ವಾಸ ತಂಡ ಜಯಭೇರಿ ಪಡೆದು ಮೊದಲು ಫೈನಲ್‌ಗೇರಿತು. ಬಳಿಕ ಎರಡನೇ ಸೆಮಿಫೈನಲ್‌ನಲ್ಲಿ ಎಂ.ಇ.ಜಿ. ಬೆಂಗಳೂರು ಹಾಗೂ ಇಲ್ಲಿನ ಕಟ್ಟೇವೀರ ತಂಡದ ನಡುವೆ ರೋಚಕ ಪಂದ್ಯ ನಡೆದು ಎಂ.ಇ.ಜಿ. ಬೆಂಗಳೂರು ಇನ್ನೊಂದು ತಂಡವಾಗಿ ಫೈನಲ್‌ಗೇರಿತು.

ಫೈನಲ್ ಪಂದ್ಯವೂ ಅತ್ಯಂತ ರೋಚಕತೆಯಲ್ಲಿ ನಡೆದು ಕೊನೆಯಲ್ಲಿ ಮೂಡಬಿದಿರೆಯ ಆಳ್ವಾಸ್ ತಂಡವೂ ಎಮ್.ಇ.ಜಿ. ಬೆಂಗಳೂರು ತಂಡವನ್ನು 30-23 ಅಂಕ ಪಡೆದು 7 ಅಂಕಗಳ ಮುನ್ನಡೆಯೊಂದಿಗೆ ರಾಜ್ಯ ಮಟ್ಟದ ರಂಜನ ಇಂಡೆನ್-2018 ಕಬಡ್ಡಿ ಪಂದ್ಯವನ್ನು ಗೆದ್ದು ಟ್ರೋಪಿ ಜೊತೆಗೆ ಒಂದು ಲಕ್ಷ ಬಹುಮಾನವನ್ನು ಪಡೆದುಕೊಂಡಿತು.

ಪಂದ್ಯದ ದ್ವಿತೀಯ ಸ್ಥಾನವನ್ನು 50 ಸಾವಿರ ನಗದು ಮತ್ತು ಟ್ರೋಪಿಯೊಂದಿಗೆ ಎಮ್.ಇ.ಜಿ. ಬೆಂಗಳೂರು ಪಡೆದುಕೊಂಡರೆ ತೃತೀಯ ಸ್ಥಾನವನ್ನು ಎರಡು ತಂಡಗಳ ಪಾಲಾಗಿದ್ದು, ಕೋಲಾ ಬೆಂಗಳೂರು ಮತ್ತು ಶ್ರೀ ಕಟ್ಟೇವೀರ ಕಬಡ್ಡಿ ತಂಡ ತಲಾ 25 ಸಾವಿರ ನಗದು ಹಾಗೂ ಟ್ರೋಫಿಗೆ ಭಾಜನರಾದರು.

ಪಂದ್ಯದ ಬೆಸ್ಟ ಡಿಪೆಂಡರ್ ಆಗಿ ಆಳ್ವಾಸ ತಂಡದ ಜಸ್ವಂತ ಹೊರಹೊಮ್ಮಿದ್ದು, ಟ್ರೋಪಿ ಮತ್ತು ಏರ್ ಕೂಲರ್ ಪಡೆದುಕೊಂಡರು. ಬೆಸ್ಟ್  ರೈಡರ್ ಆಗಿ ಎಮ್.ಇ.ಜಿ. ಬೆಂಗಳೂರು ತಂಡದ ಮಂಜುನಾಥ ಪಡೆದುಕೊಂಡಿದ್ದು, ಇವರಿಗೂ ಸಹ ಏರ್ ಕೂಲರ್ ಮತ್ತು ಟ್ರೋಫಿ ನೀಡಲಾಯಿತು. ಹಾಗೂ ಬೆಸ್ಟ ಆಲ್‌ರೌಂಡರ್ ಪಟ್ಟ ಶ್ರೀ ಕಟ್ಟೇವೀರ ಕಬಡ್ಡಿ ತಂಡದ ಆಟಗಾರ ಸಚಿನ್ ಪಡೆದುಕೊಂಡು  32 ಇಂಚಿನ ಎಲ್.ಇ.ಡಿ. ಟಿ.ವಿ ಮತ್ತೂ ಟ್ರೋಫಿ ತನ್ನದಾಗಿಸಿಕೊಂಡಿದ್ದಾರೆ.

ಮೂರು ದಿನದ ಪಂದ್ಯದುದ್ದಕ್ಕೂ ತಾಲೂಕಿನ ಕಬಡ್ಡಿ ಕ್ರೀಡಾಭಿಮಾನಿಗಳು ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡಿದ್ದು, 13 ಸಾವಿರ ಪ್ರೇಕ್ಷಕರನ್ನೊಳಗೊಂಡಂತೆ ಯಶಸ್ವಿ ಪಂದ್ಯ ಮುಕ್ತಾಯವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News