55 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣ: ಹಣಕ್ಕಾಗಿ ವಿಚಾರಣಾಧೀನ ಕೈದಿಗೆ ಹಲ್ಲೆ
ಮಂಗಳೂರು, ಜ. 22: ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನಿಗೆ ಸಹಕೈದಿಗಳು ಹಲ್ಲೆ ಮಾಡಿದ್ದಲ್ಲದೆ, ಮಾನಸಿಕ ಹಿಂಸೆ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದಾರೆಂದು ಆರೋಪಿಸಿ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೋಡಿಕೆರೆ ಗ್ಯಾಂಗ್‌ನ ತಿಲಕ್ ಸಹಿತ 8 ಮಂದಿ ವಿಚಾರಣಾಧೀನ ಕೈದಿಗಳು ಸಿರಿನ್ ಮಧುಸೂದನ್ ಗೆ 15 ಲಕ್ಷ ರೂ. ನೀಡುವಂತೆ ಪೀಡಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಕೆಆರ್‌ಐಡಿಎಲ್‌ನ ಐಒಬಿ ಬ್ಯಾಂಕ್ ಖಾತೆಯಿಂದ 55 ಕೋಟಿ ರೂ. ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಕುಳಾಯಿ ಶಾಖೆ ಮ್ಯಾನೇಜರ್ ಸಿರಿನ್ ಮಧುಸೂದನ್ ಎಂಬಾತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಸೆಲ್‌ನಲ್ಲಿಯೇ ಕೋಡಿಕೆರೆ ಗ್ಯಾಂಗ್‌ನ ತಿಲಕ್ ಮತ್ತಿತರರಿದ್ದು ಹಣಕ್ಕಾಗಿ ಸಿರಿನ್‌ಗೆ ಬೇಡಿಕೆಯಿಟ್ಟಿದ್ದರು. ಆದರೆ ಆತ ಹಣ ಕೊಡಲು ಹಿಂದೇಟು ಹಾಕಿದಾಗ ಅವರಿಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಆರ್‌ಐಡಿಎಲ್ ಸಂಸ್ಥೆಗೆ ವಂಚಿಸಿ ಹಣದಲ್ಲಿ ತಮಗೂ ಪಾಲು ನೀಡುವಂತೆ ಆರೋಪಿಗಳು ಸರಿನ್ ಮಧುಸೂದನ್‌ಗೆ ಒತ್ತಾಯಿಸಿ ಹಲ್ಲೆ ನಡೆಸುತ್ತಿದ್ದಾರೆಂದು ಆರೋಪಿಸಲಾಗಿದೆ. ಆರೋಪಿಗಳು ಸಿರಿನ್ ಪೋಷಕರಿಗೆ ಕರೆ ಮಾಡಿ ಹಣ ಪೀಡಿಸುತ್ತಿದ್ದಾರೆಂದು ಹೇಳಲಾಗಿದೆ.
ಈ ಬಗ್ಗೆ ಸಿರಿನ್‌ನ ತಂದೆ ಬರ್ಕೆ ಠಾಣೆಗೆ ದೂರು ನೀಡಿದ್ದಾರೆ.