ಸಾಮರಸ್ಯ ಮೂಡಿಸುವ ಕಾರ್ಯ ಧರ್ಮಕೇಂದ್ರಗಳ ಮೂಲಕ ನಡೆಯುತ್ತಿದೆ: ಎಚ್.ಡಿ.ದೇವೇಗೌಡ
ಉಳ್ಳಾಲ, ಜ. 22: ಸಮಾಜದಲ್ಲಿ ಅತಿ ಮುಖ್ಯ ಎನಿಸಿರುವ ಶಾಂತಿ, ಸೌಹಾರ್ದತೆ, ಸಾಮರಸ್ಯ ಮೂಡಿಸುವ ಕೆಲಸ ಧರ್ಮಕೇಂದ್ರಗಳ ಮುಖಾಂತರ ನಡೆಯುತ್ತಿದ್ದು, ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟರು.
ಅವರು ಪೆರ್ಮನ್ನೂರು ಸಂತ ಸೆಬಾಸ್ಟಿಯನ್ನರ ಧರ್ಮಕೇಂದ್ರ ಶತಮಾನೋತ್ಸವ ಸಂಭ್ರಮ 1918-2018 ಇದರ ಸಮಾರೋಪ ಸಮಾರಂಭ ದಲ್ಲಿ ಭಾಗವಹಿಸಿ ಮಾತನಾಡಿದರು.
ಜನತೆ ವದಂತಿಗಳಿಗೆ ಕಿವಿಗೊಡದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ಹೋರಾಡಲು ಮುಂದಾಗಬೇಕು. ಕಳೆದ ನೂರು ವರ್ಷಗಳಿಂದ ಸೆಬೆಸ್ಟಿಯನ್ ಧರ್ಮ ಕೇಂದ್ರ ಪ್ರದೇಶದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕವಾಗಿ ಬೆಳೆದು ಬಂದಿದೆ. ಅಲ್ಲದೆ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಅಲೋಷಿಯಸ್ ಪಾವ್ಲ್ ಡಿ.ಸೋಜ ಮಾತನಾಡಿ, ಪೆರ್ಮನ್ನೂರು ಚರ್ಚ್ ಶತಮಾನೋತ್ಸವ ಸಂಭ್ರಮ ಎಲ್ಲರಿಗೂ ಸೀಮಿತವಾಗಿದ್ದು, ಈ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ದೊರೆತಿದೆ, 2008ರಲ್ಲಿ ಸಂಕಷ್ಟಗಳು ಎದುರಾದಗಲೂ ಜಿಲ್ಲೆಯ ವಿವಿಧ ಸಮುದಾಯದವರು ಜತೆಗೂಡಿ ಸಹಾಯ ಮಾಡಿರುವುದು ಸ್ಮರಣೀಯ ಎಂದರು.
ಗುಲ್ಬರ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ.ರೋಬರ್ಟ್ ಮಿರಾಂದ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಜೆ.ಆರ್.ಲೋಬೊ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಮಂಗಳೂರು ಧರ್ಮಪ್ರಾಂತ್ಯ ವಿಕಾರ್ ಜನರಲ್ ರೈ.ರೆ.ಮೊನ್ಸಿಂಜರ್ ಡೆನಿಸ್ ಪ್ರಭು, ಚಾನ್ಸಲರ್ ವಂದನೀಯ ರೆ.ಹೆನ್ರಿ ಸಿಕ್ವೇರಾ, ಕಲ್ಯಾಣಪುರ್ ಧರ್ಮಕೇಂದ್ರದ ರೆಕ್ಟರ್ ವಂದನೀಯ ರೆ.ಫಾ.ಸ್ಟೇನಿ ಬಿ.ಲೋಬೋ, ಜೆಪ್ಪುವಿನ ಸೈಂಟ್ ಜೋಸೆಫ್ ವಾರ್ ಹೋಮ್‌ನ ರೆ.ಫಾ.ಹೆರಾಲ್ಡ್ ಸಿ. ಡಿಸೋಜ, ದೇಲಂತಬೆಟ್ಟು ಧರ್ಮಕೇಂದ್ರದ ರೆ.ಫಾ.ಪೀಟರ್ ಸೆರಾವೋ, ಎಂ.ರೋಸ್ ಸೆಲಿನ್ ಬಿಎಸ್, ಸುಶೀಲ ಸಿಕ್ವೇರಾ ಯುಎಫ್‌ಎಸ್, ಎಂ.ಪಿ. ನೊರೋನ್ಹ, ಲ್ಯಾನ್ಸಿ ರಾಡ್ರಿಗಾಸ್, ವಾಲ್ಟರ್ ನಂದಳಿಕೆ, ಎಸಿಪಿ ವೆಲೇಂಟೀನ್ ಡಿಸೋಜ, ರೋಯ್ ಕ್ಯಾಸ್ಟಲಿನೋ, ಅಧ್ಯಕ್ಷ ಲೂಯಿಸ್ ಜೆ.ಪಿಂಟೋ, ಅವಿಲ್ ಡಿಸೋಜ ಕುಂಪಲ, ಆಸ್ಕರ್ ಲಿಯೋ ಡಿಸೋಜ ರಾಣಿಪುರ, ಚಿತ್ರಕಲಾ ಚಂದ್ರಕಾಂತ್, ಕೌನ್ಸಿಲರ್‌ಗಳಾದ ಬಾಝಿಲ್ ಡಿಸೋಜ, ರಝಿಯಾ ಇಬ್ರಾಹಿಂ, ಜಾನೆಟ್ ಶಾಂತಿ ಡಿಸೋಜ, ನ್ಯಾಯವಾದಿ ರೋಶನ್ ಡಿಸೋಜ ಮುಡಿಪು, ಸಂತ ಜೋಸೆಫ್ ವಾರ್ ವಲಯದ ಪಾಲನಾ ಮಂಡಳಿ ಉಪಾಧ್ಯಕ್ಷರು, ಸಂತ ಸೆಬಾಸ್ಟಿಯನ್ ಧರ್ಮಕೇಂದ್ರ ಪೆರ್ಮನ್ನೂರಿನ ವಾರ್ಡ್ ಗುರಿಕಾರರು ಉಪಸ್ಥಿತರಿದ್ದರು.
ಪೆರ್ಮನ್ನೂರು ಧರ್ಮಕೇಂದ್ರದ ಧರ್ಮಗುರು ಡಾ.ಜೆ.ಬಿ.ಸಲ್ದಾನ ಸ್ವಾಗತಿಸಿದರು. ರೊನಾಲ್ಡ್ ಫೆರ್ನಾಂಡಿಸ್ ವಂದಿಸಿದರು.
‘ನೇತ್ರಾವತಿ ಸೇತುವೆ ನಿರ್ಮಾಣ ನಂತರ ಪೆರ್ಮನ್ನೂರು ಗ್ರಾಮಾಂತರ ಪ್ರದೇಶ ಅನ್ನುವ ಭಾವನೆ ಕಳೆದುಹೋಗಿ ಅಭಿವೃದ್ಧಿಯಲ್ಲಿ ಸ್ಪರ್ಧೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪೆರ್ಮನ್ನೂರು ಧರ್ಮಪ್ರಾಂತ್ಯ ಜನಹಿತ ಕಾರ್ಯಕ್ರಮ ನಡೆಸುವುದಾದಲ್ಲಿ ಸೂಕ್ತ ನೆರವು ಒದಗಿಸಲು ಸಿದ್ಧ’
- ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸದಸ್ಯ