×
Ad

ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆ

Update: 2018-01-22 22:18 IST

ಮಂಗಳೂರು, ಜ. 22: ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ವೈದ್ಯರ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ಇದೇ ಮೊದಲ ಬಾರಿ ಲಿವರ್ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ತಿಳಿಸಿದರು.

ಸೋಮವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಲಿವರ್‌ನ್ನು ದಾನವಾಗಿ ಪಡೆದು ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ 41 ವರ್ಷ ಪ್ರಾಯದ ವಿಜಯ್ (ಹೆಸರು ಬದಲಿಸಲಾಗಿದೆ) ಅವರಿಗೆ ಅಳವಡಿಸಲಾಗಿದೆ.

ಲಿವರ್ ಸಮಸ್ಯೆಯ ವಿಜಯ್ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಜೋಡಿಸಲಾಗಿದ್ದು, ಈಗ ರೋಗಿ ಸಂಪೂರ್ಣ ಗುಣಮುಖರಾಗಿ ಆರೋಗ್ಯದಿಂದ ಇದ್ದಾರೆ ಎಂದರು. ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಹೆಪಟೋಬಿಲಿಯರಿ ಮತ್ತು ಮಲ್ಟಿ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಶಸ್ತ್ರ ಚಿಕಿತ್ಸಕರಾದ ಡಾ. ರಾಘವೇಂದ್ರ ಸಿ.ವಿ. ಮತ್ತು ಡಾ.ಸುರೇಶ್ ರಾಘವಯ್ಯ, ಡಾ.ದೀಪ್ತಿ ರಾಮಚಂದ್ರ ಹಾಗೂ ಸರ್ಜಿಕಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್‌ಗಳಾದ ಡಾ.ರೋಹನ್ ಶೆಟ್ಟಿ, ಡಾ. ಅಶ್ವಿನ್ ಆಳ್ವ ಅವರ ತಂಡ ಕರಾವಳಿಯಲ್ಲಿ ಇದೇ ಮೊದಲ ಬಾರಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ ಎಂದವರು ಮಾಹಿತಿ ನೀಡಿದರು.

ರೋಗಿಗೆ ಲಿವರ್ ಕಸಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಇದಕ್ಕಾಗಿ ಅವರು ನಗರದ ಎ.ಜೆ. ಆಸ್ಪತ್ರೆಯಲ್ಲಿ ಕರ್ನಾಟಕ ಕಸಿ ಪ್ರಾಧಿಕಾರದ ಜೀವ ಸಾರ್ಥಕತೆ ಯೋಜನೆ ಅಡಿಯಲ್ಲಿ ಹೆಸರು ನೋಂದಾಯಿಸಿದ್ದರು. ಟ್ರಾನ್ಸ್‌ಪ್ಲಾಂಟ್ ತಂಡದ ಜತೆಗೆ, ಅನೇಸ್ತಿಯಾ ಪರಿಣತ ಮತ್ತು ಕನ್ಸಲ್ಟಂಟ್ ಟ್ರಾನ್ಸ್‌ಪ್ಲಾಂಟ್ ಅನೆಸ್ತೆಟಿಕ್ ಡಾ.ಅನಿಂದಿತಾ, ತಂಡದಲ್ಲಿದ್ದ ಟ್ರಾನ್ಸ್‌ಪ್ಲಾಂಟ್ ಅನೆಸ್ತೆಟಿಕ್‌ನ ಡಾ.ಅರುಣ್, ಡಾ.ಗುರುರಾಜ್ ತಂತ್ರಿ, ಡಾ.ತ್ರಿವಿಕ್ರಮ ತಂತ್ರಿ ಅವರ ಸಹಕಾರದಿಂದ 10 ಗಂಟೆಗಳ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿತ್ತು ಎಂದು ಡಾ.ಪ್ರಶಾಂತ್ ಮಾರ್ಲ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ  ಡಾ.ಸಂದೀಪ್, ಡಾ.ಅನಿಂದಿತಾ, ಚಿಕಿತ್ಸೆಗೆ ಒಳಗಾದ ವಿಜಯ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News