ಉಡುಪಿ: ಐಎಸ್‌ಐ ಗುಣಮಟ್ಟದ ಹೆಲ್ಮೆಟ್ ಬಳಕೆಗೆ ಸೂಚನೆ
ಉಡುಪಿ, ಜ.22: ದ್ವಿಚಕ್ರ ವಾಹನ ಸವಾರ ಹಾಗೂ ಸಹ ಸವಾರರು ಕಡ್ಡಾಯವಾಗಿ ಐಎಸ್‌ಐ/ಬಿಎಸ್‌ಐ ಗುಣಮಟ್ಟದ ಹೆಲ್ಮೆಟ್‌ನ್ನು ಬಳಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದಾದ್ಯಂತ ದ್ವಿಚಕ್ರ ವಾಹನ ಸವಾರರು ಹಾಗೂ ಸಹ ಸವಾರರು ವಾಹನ ಚಾಲನೆಯ ಸಮಯ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕೆಂಬುದಾಗಿ ರಾಜ್ಯ ಸರಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಈ ಸಂಬಂಧ ಉಡುಪಿ ಜಿಲ್ಲೆ ಯಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗಿದೆ.
ಈ ಆದೇಶವನ್ನು ಅನಿವಾರ್ಯವಾಗಿ ಪಾಲಿಸಬೇಕೆಂಬ ಕಾರಣಕ್ಕೆ ಸಾರ್ವ ಜನಿಕರು ಐಎಸ್‌ಐ/ಬಿಎಸ್‌ಐ ದೃಢೀಕರಣವಿಲ್ಲದ ರಸ್ತೆ ಬದಿ ದೊರೆಯುವ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳಿಗೆ ಮೊರೆಹೋಗುತ್ತಿದ್ದು, ಇದರಿಂದ ಅಪ ಘಾತದ ಸಮಯದಲ್ಲಿ ಅನೇಕರ ತಲೆಗೆ ತೀವ್ರತರಹದ ಪೆಟ್ಟಾಗಿ ಸಾವು ನೋವಿಗೆ ತುತ್ತಾಗುತ್ತಿದ್ದಾರೆ.
ಆದುದರಿಂದ ಇನ್ನು ಮುಂದೆ ದ್ವಿಚಕ್ರ ವಾಹನ ಸವಾರ ಹಾಗೂ ಸಹ ಸವಾರರು ಕಡ್ಡಾಯವಾಗಿ ಐಎಸ್‌ಐ/ಬಿಎಸ್‌ಐ ಗುಣಮಟ್ಟದ ಹೆಲ್ಮೆಟ್‌ನ್ನು ಬಳಸಬೇಕು. ತಪ್ಪಿದಲ್ಲಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗು ವುದು. ಯಾವುದೇ ಕಾರಣಕ್ಕೂ ಅನಧಿಕೃತ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರಿಂದ ಹಾಗೂ ರಸ್ತೆ ಬದಿ ಹೆಲ್ಮೆಟ್ ಮಾರಾಟ ಮಾಡುವವರಿಂದ ಐಎಸ್ಐ/ಬಿಎಸ್ಐ ಗುರುತಿಲ್ಲದ ಹೆಲ್ಮೆಟ್ ಖರೀದಿಸಬಾರದು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
ಅನಧಿಕೃತ ಹೆಲ್ಮೆಟ್ ತಯಾರಕರು ಮತ್ತು ಮಾರಾಟಗಾರರ ಬಗ್ಗೆ ಸಾರ್ವ ಜನಿಕರಿಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಕಂಟ್ರೋಲ್ ರೂಮ್(100/ 0820-2526709)ಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.