ರಾಜ್ಯದ ಅಪರಾಧ ಪ್ರಕರಣಗಳಲ್ಲಿ ಇಳಿಮುಖ: ಗೃಹ ಸಚಿವ ರಾಮಲಿಂಗಾ ರೆಡ್ಡಿ

Update: 2018-01-23 16:15 GMT

ಮಂಗಳೂರು, ಜ. 23: ರಾಷ್ಟ್ರೀಯ ಅಪರಾಧ ಪ್ರಕರಣಗಳನ್ನು ದಾಖಲಿಸುವ ಎನ್‌ಸಿಆರ್‌ಪಿ ವರದಿಯ ಪ್ರಕಾರ ಕರ್ನಾಟದಲ್ಲಿ ಅಪರಾಧ ಪ್ರಕರಣ ಇಳಿಮುಖವಾಗಿದೆ. ಇದನ್ನು ತಿಳಿದುಕೊಳ್ಳದೆ ಬಿಜೆಪಿಯ ಪ್ರಕಾಶ್ ಜಾವಡೇಕರ್ ಮಾತನಾಡುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಅವರು ಮಂಗಳವಾರ ನಗರದ ಕರ್ನಿರೆ ಎಂಬಲ್ಲಿ ಕೆ.ಎಸ್. ಸೈಯಿದ್ ಕರ್ನಿರೆ ಅವರ ಪುತ್ರ ಮುಹಮ್ಮದ್ ಅನ್ಸಿಫ್ ಅವರ ಮನೆಯಲ್ಲಿ ನಡೆದ ವಿವಾಹದ ಔತಣ ಕೂಟದಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಈ ವರದಿ ರಾಜ್ಯ ಸರಕಾರ ನೀಡಿರುವ ವರದಿಯಲ್ಲ, ಕೇಂದ್ರ ಸರಕಾರದ ಅಧಿಕೃತ ಸಂಸ್ಥೆ ನೀಡಿರುವ ವರದಿಯಾಗಿದೆ. ಈ ವರದಿಯ ಪ್ರಕಾರ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಅಪರಾಧ ಪ್ರಕರಣಗಳು ಶೇ. 6ಕ್ಕೆ ಏರಿಕೆಯಾಗಿತ್ತು. ಕಾಂಗ್ರೆಸ್ ಅಧಿಕಾರದಲ್ಲಿ ಈಗ ರಾಜ್ಯದ ಅಪರಾಧ ಪ್ರಕರಣಗಳ ಪ್ರಮಾಣ ಶೇ. 5ಕ್ಕೆ ಇಳಿಕೆಯಾಗಿದೆ. ಕಳೆದ ಸರಕಾರಕ್ಕಿಂತ ಈಗಿನ ಸರಕಾರದಿಂದ ಇಳಿಕೆಯಾಗಿದೆ. ಜಾವಡೇಕರ್ ತಮ್ಮ ಬಳಿ ಇರುವ ಮಾಹಿತಿಯನ್ನು ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.

ಪ್ರಕಾಶ್ ಜಾವಡೇಕರ್ ಕರ್ನಾಟಕ ಸರಕಾರ ಅಪರಾಧ ಪ್ರಕರಣಗಳಲ್ಲಿ ನಂಬರ್ ಎರಡನೆ ಸ್ಥಾನದಲ್ಲಿದೆ ಎನ್ನುವ ಹೇಳಿಕೆಗೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಗರಿಷ್ಠ ಪ್ರಮಾಣದ ಅಪರಾಧ ಪ್ರಕರಣಗಳು ನಡೆಯುತ್ತಿವೆ ಎಂದು ಕೇಂದ್ರ ಸರಕಾರದ ಸಂಸ್ಥೆಯ ವರದಿ ತಿಳಿಸುತ್ತದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಚುನಾವಣಾ ಆಯೋಗದ ಸೂಚನೆಯ ಪ್ರಕಾರ ವರ್ಗಾವಣೆ ನಡೆಯುತ್ತಿದೆ

ದೇಶದ ಎಲ್ಲಾ ರಾಜ್ಯಗಳಲ್ಲೂ ಚುನಾವನಾ ಆಯೋಗ ನೀಡುವ ಕೆಲವು ಸೂಚನೆಗಳ ಪಾಲನೆಯ ಪ್ರಕಾರ ವರ್ಗಾವಣೆಗಳು ನಡೆಯುತ್ತಿವೆ. ರಾಜ್ಯದಲ್ಲೂ ಈ ರೀತಿಯ ವರ್ಗಾವಣೆ ನಡೆಯುತ್ತಿದೆ. ಬೆಳಗಾವಿಯ ಎಸ್.ಪಿ. ರವಿಕಾಂತೇ ಗೌಡ ಅವರು ಮೂರು ವರ್ಷ ಅಲ್ಲೇ ಸೇವೆ ಸಲ್ಲಿಸಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸಲಾಗಿದೆ. ಇಲ್ಲಿಯ ಎಸ್‌ಪಿ ಯನ್ನು ಬೆಳಗಾವಿಗೆ ವರ್ಗಾಯಿಸಲಾಗಿದೆ. ಚುನಾವಣೆ ಸಂದರ್ಭ ಎಲ್ಲಾ ರಾಜ್ಯಗಳಲ್ಲೂ ಈ ರೀತಿ ನಡೆಯುತ್ತದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಅಮಿತ್ ಶಾ ಕಾರ್ಯಕ್ರಮಕ್ಕೆ ಸರಕಾರ ಅಡ್ಡಿ ಪಡಿಸಿಲ್ಲ

ಕರ್ನಾಟಕ ಬಂದ್ ಗೆ ಕರೆ ನೀಡಿರುವವರು ನಮ್ಮನ್ನು ಕೇಳಿ ಕರೆ ನೀಡಿಲ್ಲಾ, ಅದು ಅವರು ತೆಗೆದುಕೊಂಡ ತೀರ್ಮಾನ. ರಾಜ್ಯದಲ್ಲಿ ಅಮಿತ್‌ ಶಾ ಕಾರ್ಯಕ್ರಮ ನಡೆಸುವ ಬಗ್ಗೆ ನಮಗೆ ಯಾವ ಭಯ ಇಲ್ಲ. ಅದು ಬಿಜೆಪಿಯವರು ಹಮ್ಮಿಕೊಂಡ ಕಾರ್ಯಕ್ರಮ. ರಾಜ್ಯದಲ್ಲಿ ಕಾನೂನು ಪಾಲನೆಯ ಕ್ರಮವನ್ನು ಸರಕಾರ ಕ್ರಮ ಗೊಳ್ಳುತ್ತದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ  ಮೊಯ್ದಿನ್ ಬಾವ ಉಪಸ್ಥಿತರಿದ್ದರು.

ವಧು ವರರಿಗೆ ಶುಭ ಹಾರೈಕೆ

ಸೌದಿ ಅರೇಬಿಯಾದ ಅನಿವಾಸಿ ಭಾರತೀಯ ಉದ್ಯಮಿ ಕೆ.ಎಸ್. ಸೈಯಿದ್ ಅವರ ಪುತ್ರ ನವವಿವಾಹಿತರಾದ ಮುಹಮ್ಮದ್ ಅನ್ಸಿಫ್ ಹಾಗೂ ಫಾತಿಮಾ ನಶೀತಾ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಚಿವ ರಾಮಲಿಂಗಾ ರೆಡ್ಡಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಸಕ ಮೊಯ್ದಿನ್ ಬಾವ, ಉದ್ಯಮಿ ಕೆ.ಎಸ್. ಸೈಯಿದ್, ಉದ್ಯಮಿ ಅಶ್ರಫ್ ಕರ್ನಿರೆ, ಸ್ಥಳೀಯ ಗಣ್ಯರಾದ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಕಿಶೋರ್‌ ಆಳ್ವ, ಉಡುಪಿ ಜಿಲ್ಲಾ ಎಸ್.ಪಿ ಲಕ್ಷ್ಮಣ ನಿಂಬರಗಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News