×
Ad

ಜ. 28ರಂದು ಉಡುಪಿಯಲ್ಲಿ 'ರೈತ ಸಮಾವೇಶ-2018'

Update: 2018-01-23 21:57 IST

ಉಡುಪಿ, ಜ.23: ಉಡುಪಿ ಜಿಲ್ಲಾ ಕೃಷಿಕ ಸಂಘ ಕಳೆದ 21 ವರ್ಷಗಳಿಂದ ಆಯೋಜಿಸುತ್ತಿರುವ ಜಿಲ್ಲಾ ರೈತ ಸಮಾವೇಶ ಈ ಬಾರಿ ಇದೇ ಜ. 28ರಂದು ಬೆಳಗ್ಗೆ 9:30 ರಿಂದ ಸಂಜೆ 4 ರವರೆಗೆ ಕುಂಜಿಬೆಟ್ಟಿನಲ್ಲಿರುವ ಶಾರದಾ ಮಂಟಪ ಆವರಣದಲ್ಲಿ ನಡೆಯಲಿದೆ ಎಂದು ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ತಿಳಿಸಿದ್ದಾರೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಸಮಾವೇಶವನ್ನು ಉದ್ಘಾಟಿಸಲಿದ್ದು, ತೀರ್ಥಹಳ್ಳಿಯ ಖ್ಯಾತ ಚಿಂತಕ ಶ್ರೀಧರಮೂರ್ತಿ ಕೆ. ಎಸ್. ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು. ಅತಿಥಿಗಳಾಗಿ ವಿಜಯಾ ಬ್ಯಾಂಕ್ ಉಡುಪಿ ವಲಯ ಪ್ರಾದೇಶಿಕ ಪ್ರಬಂಧಕ ಎವ್. ಜೆ. ನಾಗರಾಜ್ ಹಾಗೂ ರೋಟರಿ ಕ್ಲಬ್‌ನ ಮಂಜುನಾಥ ಉಪಾಧ್ಯ ಭಾಗವಹಿಸಲಿದ್ದಾರೆ.

ಸಮಾವೇಶದ ಮೊದಲ ಕೃಷಿ ವಿಚಾರಗೋಷ್ಠಿ ಅಪರಾಹ್ನ 12ಕ್ಕೆ ನಡೆಯಲಿದ್ದು, ಮಂಗಳೂರಿನ ಗ್ರಗರಿ ಮಥಾಯಸ್ ಅಧ್ಯಕ್ಷತೆಯಲ್ಲಿ ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿ ಡಾ.ರವಿ ಭಟ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ.ಧನಂಜಯ, ವಿದ್ವಾಂಸ ಪಾದೆಕಲ್ಲು ವಿಷ್ಣು ಭಟ್ ಹಾಗೂ ಮಂಗಳೂರು ಆಕಾಶವಾಣಿಯ ಟಿ. ಎಸ್. ಪ್ರಸಾದ್ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.

ಮಧ್ಯಾಹ್ನ 1 ರಿಂದ ನಡೆಯುವ ಎರಡನೇ ಗೋಷ್ಠಿ ಪೇತ್ರಿಯ ಪ್ರಗತಿಪರ ಕೃಷಿಕ ಶ್ಯಾಮ್‌ಪ್ರಸಾದ್ ಭಟ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದದ ಡಾ.ಎಚ್.ಎಸ್.ಚೈತನ್ಯ, ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಡಾ.ಎಂ. ಸಿ.ಕಾವ್ಯಶ್ರೀ, ಬೆಳ್ತಂಗಡಿಯ ಖ್ಯಾತ ಭತ್ತ ತಳಿ ಸಂರಕ್ಷಕ ಬಿ. ಕೆ. ಪರಮೇಶ್ವರ ರಾವ್ ಹಾಗೂ ಬ್ರಹ್ಮಾವರದ ಡಾ.ಎನ್.ಇ.ನವೀನ್ ಮಾತನಾಡಲಿದ್ದಾರೆ.

ಮೂರನೇ ವಿಚಾರ ಗೋಷ್ಠಿ ಹೈನುಗಾರಿಕೆಯ ಕುರಿತಂತೆ ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಅಧ್ಯಕ್ಷತೆಯಲ್ಲಿ ನಡೆಯಲಿದೆ. 3 ರಿಂದ ಸರಕಾರದ ಕೃಷಿ, ತೋಟಗಾರಿಕೆ, ವಿದ್ಯುತ್, ಸಹಕಾರಿ, ಕಂದಾಯ ಇಲಾಖೆಗಳ ಅಧಿಕಾರಿಗಳಿಂದ ರೈತಪರ ಯೋಜನೆಗಳು ಹಾಗೂ ಕೃಷಿಕರ ವಿವಿಧ ಸಮಸ್ಯೆಗಳ ಪರಿಹಾರ-ಮಾರ್ಗೋಪಾಯ ಕುರಿತು ಪ್ರಶ್ನೋತ್ತರ, ಮಾಹಿತಿ ಹಾಗೂ ಸಂವಾದ ನಡೆಯಲಿದೆ.

ಈ ರೈತ ಸಮಾವೇಶದಲ್ಲಿ ಜಿಲ್ಲೆಯಲ್ಲಿ ಉತ್ತಮ ಕೃಷಿ ಸಾಧನೆ ಮಾಡಿರುವ ಏಳು ಮಂದಿ ಕೃಷಿಕರನ್ನು ಸನ್ಮಾನಿಸಲಾಗುವುದು. ಕೃಷಿ ಮಾಹಿತಿ- ಮಾರ್ಗ ದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲ್ಯವಿರುವ ಆಧುನಿಕ ಕೃಷಿ ಪರಿಕರ ಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ ಎಂದು ರಾಮಕೃಷ್ಣ ಶರ್ಮ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ದಿನೇಶ್ ಶೆಟ್ಟಿ ಹೆರ್ಗ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಕೋಶಾಧಿಕಾರಿ ಪಾಂಡುರಂಗ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News