ಮಂಗಳೂರಿಗೆ ಗಾಂಜಾ ಸರಬರಾಜು: ಆಂಧ್ರಪ್ರದೇಶದ ವ್ಯಕ್ತಿಯ ಬಂಧನ

Update: 2018-01-23 16:36 GMT
ಸಲೀಂ ಪಾಷಾ

ಮಂಗಳೂರು, ಜ. 23: ನಗರಕ್ಕೆ ಗಾಂಜಾ ಸರಬರಾಜು ಮಾಡುತ್ತಿದ್ದ ಕಿಂಗ್ ಪಿನ್ ಆಂಧ್ರಪ್ರದೇಶದ ಆರೋಪಿಯನ್ನು ಮಂಗಳವಾರ ಕೊಣಾಜೆ ಹಾಗೂ ರೌಡಿ ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ.

ಆಂದ್ರಪ್ರದೇಶ ಚಿತ್ತೂರಿನ ಪಲಮೇರು ನಿವಾಸಿ ಸಲೀಂ ಪಾಷಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಕೆಲವು ದಿನಗಳ ಹಿಂದೆ ತೌಡುಗೋಳಿ ಕ್ರಾಸ್ ನಿವಾಸಿ ಮುಹಮ್ಮದ್ ಅಝೀಝ್ ಯಾನೆ ಅಬ್ದುಲ್ ಅಝೀಝ್ ಎಂಬಾತನನ್ನು 10.200 ಕಿ.ಗ್ರಾಂ. ಗಾಂಜಾ ಸಹಿತ ಪೊಲೀಸರು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಆಂದ್ರದ ಪಲಮೇರುಗೆ ತೆರಳಿ ಪಾಷಾನನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಡೀಲರ್ ಆಗಿದ್ದ ಪಾಷಾನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಮಂಗ ಜಬ್ಬಾರ್, ಅಬ್ದುಲ್ ಅಝೀಝ್, ನವೀನ ಮೊದಲಾದವರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದುದಾಗಿ ಹೇಳಿದ್ದಾನೆ. ಈತನನ್ನು ಮಂಗಳೂರಿಗೆ ಕರೆ ತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅಝೀಝ್ ವಿರುದ್ಧ ಉಳ್ಳಾಲ, ಕಾವೂರು ಮತ್ತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿವೆ. ಈತ ಮಂಗಳೂರಿಗೆ ದೊಡ್ಡ ಪ್ರಮಾಣದಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದು, ಈತನನ್ನು ವಿಚಾರಣೆ ನಡೆಸಿದಾಗ ಪಲಮೇರು ಎಂಬಲ್ಲಿಂದ ಸಲೀಂ ಎಂಬಾತನಿಂದ ಗಾಂಜಾ ಖರೀದಿ ಮಾಡಿ ತರುತ್ತಿದ್ದ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.

ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಾಮರಾವ್ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ್ ವಿ., ಪಿಎಸ್‌ಐ ವೆಂಕಟೇಶ್, ಸಿಬ್ಬಂದಿಗಳಾದ ಸತೀಶ್, ನಾಗರಾಜ್, ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಿಬ್ಬಂದಿಗಳಾದ ರೆಜಿ, ಮಹೇಶ್, ಮೋಹನ್, ರಾಜಾರಾಂ, ಶರೀಫ್, ದಯಾನಂದ, ಸುಧೀರ್ ಶೆಟ್ಟಿ, ಗಿರೀಶ್, ಇಕ್ಬಾಲ್, ಸುನೀಲ್, ದಾಮೋದರ, ರವಿಚಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News