ಸ್ವರ್ಣ ನದಿ: ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕ ಕಡಿತ

Update: 2018-01-23 16:40 GMT

ಉಡುಪಿ, ಜ.23: ಉಡುಪಿ ನಗರಸಭಾ ವ್ಯಾಪ್ತಿ ಹಾಗೂ ಆಸುಪಾಸಿನ ಗ್ರಾಪಂಗಳಿಗೆ ಕುಡಿಯುವ ನೀರು ಒದಗಿಸುವ ಬಜೆ ಅಣೆಕಟ್ಟಿನಲ್ಲಿ ಸ್ವರ್ಣ ನದಿಯ ಒಳ ಹರಿವು ನಿಂತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನದಿ ನೀರನ್ನು ಕೃಷಿಗೆ ಬಳಸುತ್ತಿರುವ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಇಂದಿ ನಿಂದ ಕಡಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಕಳೆದೆರಡು ವರ್ಷ ಉಡುಪಿಯಲ್ಲಿ ಬೇಸಿಗೆಯ ಕೊನೆಯ ಎರಡು ತಿಂಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಆದ ಸಮಸ್ಯೆಗಳ ಅನುಭವದ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಿಂದಿನೆರಡು ವರ್ಷಗಳ ಪರಿಸ್ಥಿತಿ ಈ ಬಾರಿಯೂ ಎದುರಾಗಬಾರದು ಎಂಬ ಕಾರಣಕ್ಕಾಗಿ ಸಾಕಷ್ಟು ಮುಂಚಿತವಾಗಿ ರೈತರ ಪಂಪ್‌ಸೆಟ್‌ಗಳ ಸಂಪರ್ಕ ಕಡಿತ ಮಾಡಲಾಗಿದೆ ಎಂದವರು ಹೇಳಿದರು.

ಇದಕ್ಕೆ ಕಳೆದೊಂದು ವರ್ಷದಿಂದ ರೈತರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಸ್ವರ್ಣ ನದಿಯ ನೀರನ್ನು ಬಳಸುವ ರೈತರಿಗೆ ಸ್ವಂತ ನೀರಿನ ಮೂಲ ವನ್ನು ಕಂಡುಕೊಳ್ಳಲು ವಿವಿಧ ಇಲಾಖೆಗಳ ಮೂಲಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಕೊಳವೆ ಬಾವಿ, ಬಾವಿ ತೊಡಲು, ಸ್ಪ್ರಿಂಕ್ಲರ್ ಅಳವಡಿಸಲು ಬೇಕಾದ ಸಹಾಯವನ್ನು ಒದಗಿಸಲಾಗಿದೆ. ಹೀಗಾಗಿ ಈ ಪರಿಸ್ಥಿತಿಯನ್ನು ಎದುರಿಸಲು ಈ ಭಾಗದ ರೈತರು ಸನ್ನದ್ಧರಾಗಿದ್ದಾರೆ ಎಂಬ ವಿಶ್ವಾವನ್ನು ಅವರು ವ್ಯಕ್ತಪಡಿಸಿದರು.

ಇದರಿಂದ ಸುಮಾರು 350 ರೈತ ಕುಟುಂಬಗಳಿಗೆ ಭಾರೀ ತೊಂದರೆ ಯಾಗಿದೆ. ಈ ಮೊದಲು ಎರಡು ಬೆಳೆ ಬೆಳೆಯುತಿದ್ದ ರೈತರು ಕಳೆದ ಕೆಲವು ವರ್ಷಗಳಿಂದ ಎಪ್ರಿಲ್-ಮೇ ತಿಂಗಳಲ್ಲೇ ಸ್ವರ್ಣಾ ನದಿ ಬತ್ತಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಈಗ ಎರಡನೇ ಬೆಳೆಯನ್ನೇ ಕೈಬಿಟ್ಟಿದ್ದಾರೆ. ಆದರೆ ಈ ಬಾರಿ ತೋಟಗಳಿಗೆ, ತೋಟಗಾರಿಕಾ ಬೆಳೆಗಳಿಗೂ ನೀರುಣಿಸಲು ಇದರಿಂದ ತೊಂದರೆಯಾಗುತ್ತಿದೆ ಎಂದು ರೈತರು ದೂರಿದ್ದಾರೆ.

ಪ್ರತಿ ವರ್ಷ ಎಪ್ರಿಲ್-ಮೇ-ಜೂನ್ ತಿಂಗಳಲ್ಲಿ ಉಡುಪಿ ನಗರದಲ್ಲಿ ಜನರಿಗೆ ಕುಡಿಯುವ ನೀರಿಗಾಗುತ್ತಿರುವ ಬವಣೆಯನ್ನು ಅರಿತಿರುವ ನಾವು ಸಾಕಷ್ಟು ತ್ಯಾಗ ಮಾಡುತಿದ್ದೇವೆ. ಆದರೆ ಈ ಬಾರಿ ಜನವರಿ ತಿಂಗಳಿಗೇ ಕೃಷಿ ಪಂಪುಗಳ ಸಂಪರ್ಕ ಕಡಿತ ಮಾಡಿರುವುದರಿಂದ ನಾವು ತೆಂಗು ಸೇರಿದಂತೆ ತೋಟಗಾರಿಕಾ ಬೆಳೆ ಹಾಗೂ ಜೀವನೋಪಾಯಕ್ಕಾಗಿ ತರಕಾರಿಯನ್ನು ಬೆಳೆಯಲು ಸಾಧ್ಯವಾಗು ವುದಿಲ್ಲ. ಹೀಗಾದರೆ ನಾವು ಬದುಕುವುದು ಹೇಗೆ ಎಂದು ನದಿ ತಟದ ರೈತರು ಗೋಳಾಡುತಿದ್ದಾರೆ.

ಸದ್ಯಕ್ಕೆ ವಾರದಲ್ಲಿ ಒಂದು ದಿನವಾದರೂ ಸ್ವರ್ಣ ನದಿಯಿಂದ ನೀರನ್ನು ಎತ್ತಲು ಅವಕಾಶ ನೀಡಬೇಕೆಂದು ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಅವರು ಸಕಾರಾತ್ಮಕವಾಗಿ ಸ್ಪಂಧಿಸುವ ನಿರೀಕ್ಷೆ ನಮಗಿದೆ ಎಂದು ಕುದಿ ತಿಳಿಸಿದರು.

ಆದರೆ ಈ ಬಗ್ಗೆ ನಗರಸಭಾ ಆಯುಕ್ತರು ಒಪ್ಪಿಗೆ ಸೂಚಿಸಿ ವರದಿ ನೀಡಿದರೆ ಮಾತ್ರ ತನಗೆ ರೈತರ ಮನವಿಯನ್ನು ಪರಿಶೀಲಿಸಲು ಸಾಧ್ಯವಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಇಚ್ಛಾಶಕ್ತಿ ಕೊರತೆ: ಉಡುಪಿಗೆ ಕುಡಿಯುವ ನೀರಿಗಾಗಿ ಮೂರನೇ ಹಂತ ದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿಟ್ಟುಕೊಳ್ಳುವಂತೆ ನಾವು ಮನವಿ ಮಾಡುತಿದ್ದೇವೆ. ಆದರೆ ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನೇ ತೋರುತ್ತಿಲ್ಲ. ಹೀಗಾದರೆ ನಾವು ಬೀದಿಗಿಳಿದು ಹೋರಾಟ ಮಾಡುವುದೊಂದು ನಮಗಿರುವ ದಾರಿ ಎಂದು ಕುದಿ ಶ್ರೀನಿವಾಸ ಭಟ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News