ಸಂಸ್ಕೃತಿಯೇ ನಮ್ಮ ಅಸ್ತಿತ್ವ: ವಿನಯ ಕುಮಾರ್ ಸೊರಕೆ
ಹಿರಿಯಡ್ಕ, ಜ.23: ಮರಾಟಿಗರ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕಾರ್ಯ ಆಗಬೇಕು. ಇಂತಹ ಸಂಸ್ಕೃತಿಯೇ ನಮ್ಮ ಅಸ್ತಿತ್ವ. ಅದನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಯುವಕರ ಮೇಲಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಮೂಡು ಅಂಜಾರು ಶ್ರೀದುರ್ಗಾಪರಮೇಶ್ವರಿ ಮರಾಟಿ ಸಮುದಾಯದ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರವಿವಾರ ಆಯೋಜಿಸಲಾದ ವಿಚಾರ ಸಂಕಿರಣ, ಯಕ್ಷಗಾನ ಪ್ರಾತ್ಯಕ್ಷಿಕೆ, ಜಾನಪದ ಕುಣಿತ ಹಾಗೂ ಯಕ್ಷಗಾನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಯುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ಸಮಾಜ ಮುಖಿ ಕಡೆ ಕೊಂಡೊಯ್ಯುವ ಕಾರ್ಯ ಸಂಘಟನೆಗಳ ಮೂಲಕ ಆಗಬೇಕು. ಆಗ ಮಾತ್ರ ಸಮುದಾಯಗಳ ಪ್ರಗತಿ ಸಾಧ್ಯ. ಯುವಕರಲ್ಲಿ ನಾಯಕತ್ವ ಗುಣವನ್ನು ಬೆಳೆಸ ಬೇಕು. ನಮ್ಮ ಕಲೆ, ಸಂಸ್ಕೃತಿ ಪರಂಪರೆಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಅಧ್ಯಕ್ಷತೆಯನ್ನು ಕೆ.ಕೆ.ನಾಯ್ಕ ಬಾರಕೂರು ವಹಿಸಿದ್ದರು. ಮುಖ್ಯ ಅತಿಥಿ ಗಳಾಗಿ ಕೋಟ ವಿವೇಕ ಕಾಲೇಜಿನ ಉಪನ್ಯಾಸಕ ಸಂಜೀವ ನಾಯ್ಕ, ವಿಶ್ವನಾಥ ಶೆಣೈ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ದೇವದಾಸ ಪೈ, ತಾಪಂ ಸದಸ್ಯೆ ಸಂಧ್ಯಾ ಕಾಮತ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕಿ ಸ್ವಾಗತಿಸಿದರು. ಶಶಿಕಾಂತ ವಂದಿಸಿದರು. ಸುಧಾಕರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.