ಜ. 28ರಂದು ಪುತ್ತೂರಿನಲ್ಲಿ "ಜಿಲ್ಲಾ ಜನಪದ ಸಂಸ್ಕತ ಸಮ್ಮೇಳನ"

Update: 2018-01-23 17:45 GMT

ಬಂಟ್ವಾಳ, ಜ. 23: ಸಂಸ್ಕತ ಭಾರತೀ ವತಿಯಿಂದ ಪುತ್ತೂರು "ಜಿಲ್ಲಾ ಜನಪದ ಸಂಸ್ಕತ ಸಮ್ಮೇಳನ"ವು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಕೇಶವ ಸಂಕಲ್ಪ ಸಭಾಂಗಣದಲ್ಲಿ ಜ. 28ರಂದು ನಡೆಯಲಿದೆ ಎಂದು ಸಮ್ಮೇಳನ ಸಮಿತಿ ಸಂಚಾಲಕ ಮುರಳಿ ಕೃಷ್ಣ ಹೇಳಿದ್ದಾರೆ.

ಅವರು ಮಂಗಳವಾರ ಸಂಜೆ ಬಿ.ಸಿ.ರೊಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ್ ಭಟ್ ಕಲ್ಲಡ್ಕ ಸಮ್ಮೇಳನವನ್ನು ಉದ್ಘಾಟಿಸುವರು. ಉದ್ಯಮಿ ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸುವರು. ಮುಳಿಯ ಶ್ಯಾಮ್ ಭಟ್ ಅವರು ಉಪಸ್ಥಿತರಿರುವರು. ಬಳಿಕ ಎರಡು ಗೋಷ್ಠಿಗಳು ನಡೆಯಲಿದ್ದು, ಡಾ.ಶ್ರೀಧರ್ ಭಟ್ ವಿದ್ವಾನ್ ಹಾಗೂ ಮೈತ್ರೇಯಿ ಗುರುಕುಲದ ಶಿಕ್ಷಕ ಉಮೇಶ್ ಹೆಗ್ಡೆ ವಿಚಾರ ಮಂಡಿಸುವರು.

ಮಧ್ಯಾಹ್ನ ಸಂಸ್ಕತದಲ್ಲಿಯೇ ಮನೋರಂಜನ ಕಾರ್ಯಕ್ರಮಗಳು, ಸಂಸ್ಕತ ಮತ್ತು ವಿಜ್ಞಾನದ ಸಂಬಂಧವನ್ನು ತೋರಿಸುವ ಆಕರ್ಷಕ ಪ್ರದರ್ಶನ, ಸಂಸ್ಕತ ಪುಸ್ತಕ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸ್ಕತ ಭಾರತೀಯ ಅಖಿಲ ಭಾರತ ಪ್ರಚಾರಕ ಸತ್ಯನಾರಾಯಣ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಭಾರತದ ಅಧಿಕೃತ ಭಾಷೆಗಳಲ್ಲಿ ಒಂದಾಗಿರುವ ಸಂಸ್ಕತವನ್ನು ದೇಶದ ಪ್ರತಿ ತಾಲೂಕಿನಲ್ಲಿ ಸಮ್ಮೇಳನ ನಡೆಸುವ ಮೂಲಕ ಸಂಸ್ಕತ ಭಾಷೆಯನ್ನು ಉಳಿಸುವ ಸಲುವಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಂಸ್ಕತ ಭಾರತೀಯು ಕಳೆದ 25 ವರ್ಷಗಳಲ್ಲಿ ಒಂದು ಲಕ್ಷ ಸಂಸ್ಕತ ಸಂಭಾಷಣಾ ಶಿಬಿರ ನಡೆಸಿ, 4 ಲಕ್ಷ ಜನರಿಗೆ ಸಂಸ್ಕತ ಸಂಭಾಷನೆಯನ್ನು ಕಲಿಸಿಕೊಟ್ಟಿದೆ. ಈ ಭಾಷೆಯು ಒಂದು ವರ್ಗಕ್ಕೆ ಸೀಮಿತವಾಗಿರದೇ ಪ್ರತಿಯೊಬ್ಬರೂ ಯಾವುದೇ ಬೇಧ ಬಾವವಿಲ್ಲದೆ ಕಲಿಯಬಹುದು. ಈ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ಅಗತ್ಯವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಜಿಲ್ಲಾ ಸಂಯೋಜಕ ಜಯರಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News