ಗರ್ಭಿಣಿಯೊಂದಿಗೆ ಅನುಮಾನಾಸ್ಪದ ವರ್ತನೆ: ಕೊಲಾಸೊ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು

Update: 2018-01-23 18:20 GMT

ಮಂಗಳೂರು, ಜ. 23: ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಂದಿಗೆ ಆಸ್ಪತ್ರೆಯ ಸಿಬ್ಬಂದಿಯೋರ್ವ ಅನುಮಾನಾಸ್ಪದವಾಗಿ ವರ್ತಿಸಿ ಇಂಜೆಕ್ಷನ್ ಚುಚ್ಚಲು ಯತ್ನಿಸಿದ ಘಟನೆಯ ವಿರುದ್ಧ ಆಕೆಯ ಪತಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಹಂಝ ಅವರ ಪತ್ನಿ ಆಯಿಶತ್ ಆರಿಫಾ ಎಂಬವರಿಗೆ ಹೆರಿಗೆ ನೋವು ಕಾಣಿಸಿದ್ದರಿಂದ ಜ. 17ರಂದು ಮುಂಜಾನೆ 5:30ಕ್ಕೆ ನಗರದ ಕೊಲಾಸೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಿಫಾ ಅವರನ್ನು ಅಂದು 8:30ಕ್ಕೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದರು. ಬೆಳಗ್ಗೆ 9 ಗಂಟೆಗೆ ಅಪರಿಚಿತ ವ್ಯಕ್ತಿಯೋರ್ವ ಆರಿಫಾ ಅವರು ದಾಖಲಾಗಿದ್ದ ಕೊಠಡಿಗೆ ಪ್ರವೇಶಿಸಿ ಇಂಜಕ್ಷನ್ ಚುಚ್ಚಲು ಬಂದಿದ್ದು, ಈ ಸಂದರ್ಭ ಆರಿಫಾ ಅವರಿಗೆ ಅನುಮಾನ ಉಂಟಾಗಿ ನೀನು ಯಾರು? ರೂಂಗೆ ಯಾಕೆ ಬಂದೆ ಎಂದು ಕೇಳಿದ್ದಾರೆ. ಆರಿಫಾ ಅವರು ಕೊಠಡಿಯಿಂದ ಓಡಿ ಹೋಗಿ ಅಲ್ಲೇ ಇದ್ದ ಪತಿಯ ಬಳಿ ಹೋದಾಗ ಅಪರಿಚಿತ ವ್ಯಕ್ತಿ ಓಡಲು ಯತ್ನಿಸಿದ್ದಾನೆ. ಆತನನ್ನು ವಿಚಾರಿಸಿದಾಗ ‘ತಾನು ಆಸ್ಪತ್ರೆಯಲ್ಲಿ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ಈ ವಿಷಯ ಯಾರಿಗೂ ಹೇಳಬೇಡಿ. ಹೇಳಿದರೆ ನನ್ನನ್ನು ಕೆಲಸದಿಂದ ತೆಗೆಯುತ್ತಾರೆ ಎಂದು ಹೇಳಿ ಓಡಿ ಹೋಗಿದ್ದಾನೆ ಎಂದು ಆರಿಫಾ ಅವರ ಪತಿ ಹಂಝ  ಕದ್ರಿ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.

ಈ ಅಪರಿಚಿತ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಬೇಕು. ಆತನಿಗೆ ಕುಮ್ಮಕ್ಕು ನೀಡಿದ ಹೆರಿಗೆ ರೂಮ್‌ನಲ್ಲಿದ್ದ ಮಹಿಳಾ ಸಿಬ್ಬಂದಿಗಳನ್ನು ಕೂಡ  ವಿಚಾರಣೆ ಮಾಡಿ ನ್ಯಾಯ ದೊರಕಿಸಿ ಕೊಡಬೇಕೆಂದು ಹಂಝ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಕೊಲಾಸೊ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯಿಂದ ಹೇಳಿಕೆ ಪಡೆಯಲಾಗಿದೆ. ಹಂಝ ಅವರು ನೀಡಿರುವ ದೂರಿಗೆ ಸಂಬಂಧಿಸಿ ಹಿರಿಯ ಅಧಿಕಾರಿಗಳಿಂದ ಕಾನೂನು ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕದ್ರಿ ಠಾಣೆ ಪಿಎಸ್ಐ ಮಾರುತಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News