ಮಲ್ಪೆ: ನಾಡ ದೋಣಿ ಮೀನುಗಾರರ ಮುಷ್ಕರ

Update: 2018-01-23 18:27 GMT

ಉಡುಪಿ, ಜ.23: ಯಾಂತ್ರಿಕ ಬೋಟುಗಳು ಸಮುದ್ರದ 12 ನಾಟಿಕಲ್ ಮೈಲುಗಳ ಒಳಗೆ ಕಾನೂನು ಬಾಹಿರವಾಗಿ ಮೀನುಗಾರಿಕೆ ನಡೆಸುತ್ತಿರುವುದನ್ನು ವಿರೋಧಿಸಿ ಮಲ್ಪೆಸಮುದ್ರ ತೀರದ ಸಾಂಪ್ರದಾಯಿಕ ನಾಡದೋಣಿ ಮೀನು ಗಾರರ ಸಂಘ ಮೀನುಗಾರಿಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದೆ.

ಯಾಂತ್ರಿಕ ಬೋಟುಗಳಿಗೆ 12 ನಾಟಿಕಲ್ ಮೈಲುಗಳ ಒಳಗೆ ಮೀನುಗಾರಿಕೆ ನಡೆಸುವುದಕ್ಕೆ ಕಾನೂನಿನಲ್ಲಿ ನಿಷೇಧ ಇದ್ದರೂ ಈ ಕಾನೂನನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ದೈನಂದಿನ ಜೀವನಕ್ಕೆ ಮೀನುಗಾರಿಕೆ ಯನ್ನೇ ಅವಲಂಬಿಸಿರುವ ನಾಡದೋಣಿ ಮೀನುಗಾರರಿಗೆ ಸಮುದ್ರ ತೀರದಲ್ಲಿ ಮೀನುಗಳು ಸಿಗದೆ ನಷ್ಟ ಅನುಭವಿಸುತ್ತಿದ್ದಾರೆ ಎಂದು ಸಂಘ ದೂರಿದೆ.

ಯಾಂತ್ರಿಕ ಬೋಟುಗಳು 12 ನಾಟಿಕಲ್ ಮೈಲಿನೊಳಗೆ ಮೀನುಗಾರಿಕೆ ಮಾಡದಂತೆ ಕ್ರಮ ಕೈಗೊಳ್ಳುವಂತೆ ನಾಡದೋಣಿ ಮೀನುಗಾರರು ಸಚಿವ ಪ್ರಮೋದ್ ಮಧ್ವರಾಜ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಘದ ಸುಮಾರು 100 ನಾಡ ದೋಣಿಗಳ 4000 ಕ್ಕೂ ಅಧಿಕ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಕರ್ಕೇರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಯಾಂತ್ರಿಕ ಬೋಟುಗಳು ಬಲವಂತವಾಗಿ ನಾಡದೋಣಿ ಮೀನು ಗಾರರ ದಕ್ಕೆಯಲ್ಲಿಯೇ ಮೀನು ಖಾಲಿ(ಅಲ್ ಲೋಡ್) ಮಾಡುತ್ತಿದ್ದಾರೆ. ಇದರಿಂದ ನಾಡದೋಣಿ ಮೀನುಗಾರರಿಗೆ ತಾವು ಹಿಡಿದ ಮೀನು ಖಾಲಿ ಮಾಡುವುದಕ್ಕೆ ಸ್ಥಳವಾಕಾಶದ ತೀವ್ರ ಕೊರತೆಯಾಗುತ್ತಿದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘದ ಕಾರ್ಯದರ್ಶಿ ಪ್ರವೀಣ್ ಶ್ರೀಯಾನ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News