ದೀಪಕ್ ರಾವ್ ಕೊಲೆ ಪ್ರಕರಣ: ಮತ್ತೆ 6 ಮಂದಿಯ ಬಂಧನ
ಮಂಗಳೂರು, ಜ. 24: ನಗರದ ಸುರತ್ಕಲ್ ಕಾಟಿಪಳ್ಳದಲ್ಲಿ ಜ. 3ರಂದು ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಗಳೊಂದಿಗೆ ಸಂಚು ರೂಪಿಸಿ, ಕೃತ್ಯಕ್ಕೆ ಸಹಾಯ ಮಾಡಿರುವ ಆರೋಪದಲ್ಲಿ ಮತ್ತೆ 6 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅವರು, ಸಂಚು ಹಾಗೂ ಕೃತ್ಯಕ್ಕೆ ನೆರವು ನೀಡಿದ ಆರೋಪದಲ್ಲಿ ಚೊಕ್ಕಬೆಟ್ಟುವಿನ ಮುಹಮ್ಮದ್ ರಫೀಕ್ ಯಾನೆ ಮಾಂಗೋ ರಫೀಕ್, ಇರ್ಫಾನ್, ಕಾಟಿಪಳ್ಳದ ಮುಹಮ್ಮದ್ ಅನಾಸ್ ಯಾನೆ ಅಂಚು, ಮುಹಮ್ಮದ್ ಝಾಹೀದ್ ಯಾನೆ ಜಾಹೀ, ಹಿದಾಯಿತುಲ್ಲಾ ಹಾಗೂ ಚೊಕ್ಕಬೆಟ್ಟುವಿನ ಇಮ್ರಾನ್ ನವಾಝ್‌ರನ್ನು ದಸ್ತಗಿರಿ ಮಾಡಿರುವುದಾಗಿ ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಮುಹಮ್ಮದ್ ನೌಷಾದ್, ಮುಹಮ್ಮದ್ ಇರ್ಷಾನ್ ಯಾನೆ ಇರ್ಶಾ, ಅಬ್ದುಲ್ ಅಝೀಝ್ ಯಾನೆ ಅಝೀಝ್, ಅಬ್ದುಲ್ ಅಝೀಮ್ ಯಾನೆ ಅಝೀಮ್‌ರನ್ನು ಈಗಾಗಲೇ ದಸ್ತಗಿರಿ ಮಾಡಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಒಳಸಂಚು ಹಾಗೂ ನೆರವು ನೀಡಿದ ಆರೋಪದಲ್ಲಿ ದಸ್ತಗಿರಿ ಮಾಡಲಾಗಿರುವ ಮುಹಮ್ಮದ್ ರಫೀಕ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ಹಾಗೂ ಇರ್ಫಾನ್ ವಿರುದ್ಧ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿವೆ. ಮುಹಮ್ಮದ್ ಅನಸ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ, ಹಲ್ಲೆ ಪ್ರಕರಣ ದಾಖಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ ದಾಖಲಾಗಿದೆ.
ಮುಹಮ್ಮದ್ ಝಾಹೀದ್ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು, ಒಂದು ಕಳವು ಪ್ರಕರಣ ಮತ್ತು ಒಂದು ಹಲ್ಲೆ ಪ್ರಕರಣ ದಾಖಲಾಗಿವೆ. ಮೂಡುಬಿದಿರೆ ಠಾಣೆಯಲ್ಲಿಯೂ ಒಂದು ಕಳವು ಪ್ರಕರಣ ದಾಖಲಾಗಿದೆ.
ಹಿದಾಯಿತುಲ್ಲಾ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ, ಇಮ್ರಾನ್ ನವಾಝ್ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.