ಪ್ರಚೋದನಕಾರಿ ಭಾಷಣ ಮಾಡಿದ ಶಾಸಕ ಸುನೀಲ್ ರನ್ನು ಬಂಧಿಸಿ: ಮಮತಾ ಗಟ್ಟಿ
ಮಂಗಳೂರು, ಜ.24: ‘ಬಂಟ್ವಾಳದಲ್ಲಿ ಅಲ್ಲಾಹು- ರಾಮನ ನಡುವೆ ಸ್ಪರ್ಧೆ’ ಎಂದು ಧಾರ್ಮಿಕ ಭಾವನೆ ಕೆರಳಿಸುವ ಹೇಳಿಕೆ ನೀಡಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಕೂಡಲೇ ಅವರನ್ನು ಬಂಧಿಸಬೇಕು ಎಂದು ಮಹಿಳಾ ಕಾಂಗ್ರೆಸ್ ನಾಯಕಿ ಹಾಗೂ ಜಿ.ಪಂ. ಸದಸ್ಯೆ ಮಮತಾ ಗಟ್ಟಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಐಕ್ಯತೆಯಿಂದ ಬಾಳುತ್ತಿರುವ ವಿಭಿನ್ನ ಧರ್ಮೀಯರ ನಡುವೆ ವೈಷಮ್ಯ ಸೃಷ್ಟಿಯಾಗಲು ಶಾಸಕ ಸುನೀಲ್‌ರಂತಹ ನಾಯಕರೇ ಕಾರಣ. ಬಹಿರಂಗವಾಗಿ ಕೋಮು ಭಾವನೆ ಕೆರಳಿಸುವ ಮಾತುಗಳನ್ನಾಡಿರುವುದು ಸಂವಿಧಾನ ಬಾಹಿರವಾಗಿದ್ದು, ಕೂಡಲೇ ಶಾಸಕರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ರಾಜ್ಯದಲ್ಲಿ ದೊಂಬಿ, ಗಲಾಟೆ ನಡೆಸಲು ಇಲ್ಲಿನ ಬಿಜೆಪಿ ಪ್ರಮುಖರು ಪಿತೂರಿ ರೂಪಿಸಿದ್ದಾರೆ. ಅದಕ್ಕಾಗಿಯೇ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಂಘರ್ಷ ನಡೆಯಲು ಪ್ರೇರೇಪಿಸುತ್ತಿದ್ದಾರೆ ಎಂದು ಮಮತಾ ಗಟ್ಟಿ ಆರೋಪಿಸಿದರು.
ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ನೋಡಿ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಸೋಲಿಸುವುದು ಹೇಗೆಂದು ತಿಳಿಯದೆ ಬಿಜೆಪಿಯವರು ಕಂಗಾಲಾಗಿದ್ದಾರೆ ಎನ್ನುವುದಕ್ಕೆ ಶಾಸಕ ಸುನೀಲ್ ಕುಮಾರ್ ಹೇಳಿಕೆಯೇ ಸಾಕ್ಷಿ. ಬಿಜೆಪಿಯವರಿಗೆ ದೇಶದ ಬಹುತ್ವ, ಸಂಸ್ಕೃತಿಯ ಬಗ್ಗೆ ನಂಬಿಕೆಯೇ ಇಲ್ಲ ಎನ್ನುವುದನ್ನು ಈ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಅಭಿವೃದ್ಧಿಯ ಹರಿಕಾರರಾಗಿ ಆರು ಬಾರಿ ಚುನಾವಣೆ ಗೆದ್ದಿದ್ದಾರೆ. ಜನರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ. ಬಂಟ್ವಾಳದ ಮತದಾರರಿಗೆ ರಮಾನಾಥ ರೈ ಏನೆಂಬುದು ಗೊತ್ತಿದೆ. ಯಾರನ್ನು ಗೆಲ್ಲಿಸಬೇಕು ಎಂಬುದೂ ಗೊತ್ತಿದೆ. ಅದನ್ನು ಬಿಜೆಪಿಯವರು ಕಲಿಸಬೇಕಾಗಿಲ್ಲ ಎಂದು ಮಮತಾ ಗಟ್ಟಿ ಕುಟುಕಿದರು.
ಕಾಂಗ್ರೆಸ್ ಮುಖಂಡರಾದ ಎ.ಸಿ. ವಿನಯರಾಜ್, ವಿಶ್ವಾಸ್ ಕುಮಾರ್ ದಾಸ್, ನಮಿತಾ ರಾವ್, ಅಪ್ಪಿ, ನೀರಜ್ ಮತ್ತಿತರರಿದ್ದರು.