×
Ad

ನೆಟ್ ಪರೀಕ್ಷೆ: ಯುಜಿಸಿಯ ನಿರ್ಧಾರಕ್ಕೆ ಎಸ್ ಐ ಒ ಸ್ವಾಗತ

Update: 2018-01-24 17:36 IST

ದೆಹಲಿ, ಜ. 24: ನೆಟ್ ಪರೀಕ್ಷೆಯ ಬಗ್ಗೆ ಸಿಬಿಎಸ್ ಇ ವಿದ್ಯಾರ್ಥಿಗಳ ವಿರುದ್ಧವಾಗಿ ತೋರಿತ್ತು ಎನ್ನಲಾದ ನಿರ್ಲಕ್ಷ್ಯತೆಯನ್ನು ಪ್ರಶ್ನಿಸಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್ ಐ ಒ) ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿರುವ ಯುಜಿಸಿ, ವರ್ಷದಲ್ಲಿ ಎರಡು ಪರೀಕ್ಷೆ ನಡೆಸಬೇಕು ಹಾಗೂ ವಯೋಮಿತಿಯನ್ನು 28ರಿಂದ 30ಕ್ಕೆ ಏರಿಸಬೇಕು ಎಂದು ನಿರ್ದೇಶನ ನೀಡಿರುವುದು ಉತ್ತಮ ನಿರ್ಧಾರ ಎಂದು ಎಸ್ ಐ ಒ ತಿಳಿಸಿದೆ.

ಸಿಬಿಎಸ್ ಸಿ ಯು ಪರೀಕ್ಷೆಯನ್ನು ಅಮಾನತುಗೊಳಿಸಿ ನಿರ್ಧಾರ ತೆಗೆದುಕೊಂಡಿದ್ದನ್ನು ಪ್ರಶ್ನಿಸಿ ಎಸ್ ಐ ಒ ಸುಪ್ರೀಂ ಕೋರ್ಟಿಗೆ ಮನವಿಯನ್ನು ಸಲ್ಲಿಸಿತ್ತು. ಈ ಮನವಿಯನ್ನು ಪರಿಗಣಿಸಿದ ಉಚ್ಛ ನ್ಯಾಯಾಲಯವು ದೆಹಲಿ ಹೈಕೋರ್ಟ್ ಗೆ 2017 ರ ಆಗಸ್ಟ್ ನಲ್ಲಿ ವರ್ಗಾವಣೆ ಮಾಡಿತ್ತು. ಇದನ್ನು ಪರಿಗಣಿಸಿದ ದೆಹಲಿ ಹೈಕೋರ್ಟ್ ಉತ್ತರ ಕೇಳಿ ಕಳೆದ ಅಕ್ಟೋಬರ್ ನಲ್ಲಿ ಕೇಂದ್ರ ಸರಕಾರಕ್ಕೆ ನೋಟಿಸ್ ಕಳುಹಿಸಿತ್ತು. ನ್ಯಾಯಾಲಯದ ನೋಟಿಸ್ ಗೆ ಅಫಿದವಿಟ್ ಸಲ್ಲಿಸಲು ಯುಜಿಸಿ ಹಾಗೂ ಸಿಬಿಎಸ್ ಇ ವಿಫಲವಾಗಿತ್ತು.  ಅಲ್ಲದೇ, ವಯೋಮಿತಿ ಮೀರಿದ ವಿದ್ಯಾರ್ಥಿಗಳಿಗೆ ನಿಗದಿತ ವಯೋಮಿತಿಯನ್ನು ಹೆಚ್ಚಿಸಿ 2017ರಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯಲು ಅನುಮತಿಸುವಂತೆ ಕೂಡ ಮನವಿಯನ್ನು ಸಲ್ಲಿಸಿತ್ತು. ಇದೀಗ ಬೋರ್ಡ್ ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆ ಆರ್ ಎಫ್) ಗೆ 28 ರಿಂದ 30ಕ್ಕೆ ಏರಿಸಿದೆ. ಈ ನಿರ್ಧಾರವು ಹೋರಾಟಕ್ಕೆ ಸಂದ ಜಯ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್ ಐ ಒ) ತಿಳಿಸಿದೆ.

ಸಿಬಿಎಸ್ ಇ ಯ ನಿರ್ಧಾರದ ಬಗ್ಗೆ ಮಧ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿ ಕಳೆದ ನವೆಂಬರ್ ನಲ್ಲಿ ಯುಜಿಸಿಯ ಕೇಂದ್ರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತ್ತು. ನ್ಯಾಯಾಲಯದಲ್ಲಿ ಜ.25ಕ್ಕೆ ಅರ್ಜಿ ವಿಚಾರಣೆಯು ನಿಗದಿಯಾಗಿದ್ದು, ಇದಕ್ಕಿಂತ ಮುನ್ನವೇ ಯುಜಿಸಿ ಈ ನೋಟಿಫಿಕೇಶನ್ ಕಳುಹಿಸಿದೆ. ದೆಹಲಿ ಹೈಕೋರ್ಟ್ 2017 ಅಕ್ಟೋಬರ್ ನಲ್ಲಿ ಕೌಂಟರ್ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದ್ದರೂ ಕೂಡಾ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿದ್ಯಾರ್ಥಿಗಳ ಪರವಾಗಿ ಬಂದಿರುವ ಯುಜಿಸಿಯ ಈ ನಿರ್ಧಾರವನ್ನು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್ ಐ ಓ) ಸ್ವಾಗತಿಸುತ್ತದೆ ಎಂದು ಎಸ್ ಐ ಒ ರಾಷ್ಟ್ರೀಯ ಮಾಧ್ಯಮ ಕಾರ್ಯದರ್ಶಿ ಸೈಯ್ಯದ್ ಅಝರುದ್ದೀನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News