×
Ad

ರಾಜಕೀಯ ಒತ್ತಡಕ್ಕೆ ಮಣಿದು ಪ್ರಕರಣ ದಾಖಲು: ವಿಎಚ್‌ಪಿ

Update: 2018-01-24 20:39 IST

ಉಡುಪಿ, ಜ.24: ಲವ್‌ಜಿಹಾದ್ ವಿರುದ್ಧ ಅಭಿಯಾನ ನಡೆಸಿದ ವಿಎಚ್‌ಪಿ, ಬಜರಂಗದಳ ಹಾಗೂ ದುರ್ಗಾ ವಾಹಿನಿಯ ಪ್ರಮುಖರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಉಡುಪಿ ಪೊಲೀಸರು ರಾಜಕೀಯ ಪೊಲೀಸ್‌ಗಿರಿ ನಡೆಸಿದ್ದಾರೆ ಎಂದು ವಿಎಚ್‌ಪಿ ಉಡುಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲವ್ ಜಿಹಾದ್ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಎಂಜಿಎಂ ಕಾಲೇಜು ಬಸ್ ನಿಲ್ದಾಣದ ಬಳಿ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಒತ್ತಡ ಹೇರಿಲ್ಲ, ಸಂಚಾರ ವ್ಯವಸ್ಥೆ ಅಡ್ಡಿ ಪಡಿಸಿಲ್ಲ ಮತ್ತು ಸಾಮಾಜಿಕ ಸಾಮರಸ್ಯ ಕದಡುವ ಹೇಳಿಕೆ ನೀಡಿಲ್ಲ. ಆದರೂ ಪೊಲೀಸರು ಸೆಕ್ಷನ್ 143, 149 ಮತ್ತು 209 ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದಾರೆ ಎಂದರು.

ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಸಂಘಟನೆಯ ಮುಖಂಡರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿರುವುದು ಖಂಡನೀಯ. ಮುಂದಿನ ಏಳು ದಿನಗಳ ಒಳಗೆ ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು. ಲವ್ ಜಿಹಾದ್ ವಿರುದ್ಧದ ಅಭಿಯಾನವನ್ನು ಮುಂದು ವರೆಸಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಎಚ್‌ಪಿ ಉಪಾಧ್ಯಕ್ಷ ಅಚ್ಯುತ ಅಮೀನ್ ಕಲ್ಮಾಡಿ, ನಗರ ಅಧ್ಯಕ್ಷ ಸಂತೋಷ್ ಸುವರ್ಣ ಬೊಳ್ಜೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News