ಪೂಜಾರಿಯನ್ನು ನಿಂದಿಸಿದ ರೈ ಪ್ರಮಾಣ ಮಾಡಲು ಪಣೋಲಿಬೈಲಿಗೆ ಬರಲಿ: ಹರಿಕೃಷ್ಣ ಬಂಟ್ವಾಳ್
ಬಂಟ್ವಾಳ, ಜ. 24: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರನ್ನು ಅವಾಚ್ಯವಾಗಿ ನಿಂದಿಸಿರುವ ರಮಾನಾಥ ರೈ ಸತ್ಯ ಪ್ರಮಾಣ ಮಾಡಲು ಪಣೋಲಿಬೈಲು ಕಲ್ಲುರ್ಟಿ ಕ್ಷೇತ್ರಕ್ಕೆ ಬರಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಸವಾಲು ಹಾಕಿದ್ದಾರೆ.
ಸಜೀಪಮೂಡ ಗ್ರಾಮದ ಬೊಳ್ಳಾಯಿಯಲ್ಲಿ ಮಂಗಳವಾರ ರಾತ್ರಿ ನಡೆದ ಬಿಜೆಪಿ ಬಂಟ್ವಾಳ ವತಿಯಿಂದ ನಡೆಯುತ್ತಿರುವ ಪರಿವರ್ತನೆಗೆ ನಮ್ಮ ನಡಿಗೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಸೆಕ್ಯುಲರ್ ಅಲ್ಲ. ಅವರು ನ್ಯೂಕ್ಲಿಯರ್ ಬಾಂಬ್ ಇದ್ದಂತೆ, ಅವರು ಅಧಿಕಾರ ದಲ್ಲಿರುವವರೆಗೂ ಜಿಲ್ಲೆಯಲ್ಲಿ ಸಾವು ನೋವು ಸಂಭವಿಸುತ್ತಿರುತ್ತದೆ ಎಂದು ಹೇಳಿದ್ದಾರೆ.
ಸಚಿವ ರಮನಾಥ ರೈ ಜಿಲ್ಲೆಯಲ್ಲಿ ಸಮಗ್ರ ಅಭಿವೃದ್ಧಿಯಾಗಿದೆ ಎನ್ನುತ್ತಾರೆ. ಆದರೆ, ಅವರ ಅಧಿಕಾರವಧಿಯಲ್ಲಿ ಗಲಾಟೆ, ಹತ್ಯೆಗಳ ಅಭಿವೃದ್ದಿಯಾಗಿದೆ ಎಂದು ಟೀಕಿಸಿದ ಅವರು, ಅಕ್ರಮ ಮರಳು ಹಾಗೂ ಮರದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಎಸ್ಪಿ ಸುಧೀರ್ ರೆಡ್ಡಿಯವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಆರೋಪಿಸಿದರು.
ಪಾದಯಾತ್ರೆಯ ರೂವಾರಿ ರಾಜೇಶ್ ನಾಯ್ಕೆ ಉಳಿಪ್ಪಾಡಿಗುತ್ತು ಮಾತನಾಡಿ, ಜಿಪಂ ಸದಸ್ಯ ಎಂ.ಎಸ್.ಮಹಮ್ಮದ್ ಯಾರೆಂದೆ ನನಗೆ ಗೊತ್ತಿಲ್ಲ. ಆ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದೇ ಇಲ್ಲ. ಆದರೆ ಮುಂದಿನ ಜಿಪಂ ಚುನಾವಣೆಯಲ್ಲಿ ಕೊಳ್ನಾಡುವನ್ನು ಬಿಜೆಪಿ ಗೆಲವು ಸಾಧಿಸಲಿದೆ ಎಂಬುದನ್ನು ನೆನಪಿಟ್ಟುಕೊಳ್ಳಲಿ ಎಂದು ಹೇಳಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಜಿಪಂ ಸದಸ್ಯರಾದ ರವೀಂದ್ರ ಕಂಬಳಿ, ಕಮಾಲಾಕ್ಷಿ ಪೂಜಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಎಸ್ಸಿ ಮೋರ್ಚಾ ಅಧ್ಯಕ್ಷ ದಿನೇಶ್ ಅಮ್ಟೂರು, ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಆರ್. ಕೋಟ್ಯಾನ್, ಮಾಜಿ ತಾಪಂ ಅಧ್ಯಕ್ಷ ಯಶವಂತ ದೇರಾಜೆ, ಮಾಜಿ ತಾಪಂ ಉಪಾಧ್ಯಕ್ಷ ಆನಂದ ಶಂಭೂರು, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಶ್ರೀಕಾಂತ ಶೆಟ್ಟಿ, ಸಜೀಪ ಮುನ್ನೂರು ಶಕ್ತಿಕೇಂದ್ರದ ಅಧ್ಯಕ್ಷ ಅರವಿಂದ ಭಟ್, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೇಟ್ಟು, ಪಕ್ಷದ ಸ್ಥಳೀಯ ಮುಖಂಡರಾದ ಸುರೇಶ ಪೂಜಾರಿ, ಜಯಶಂಕರ ಬಾಸ್ರಿತ್ತಾಯ, ಜಗದೀಶ್ ಗಾಣಿಗ, ಅಶೋಕ ಗಟ್ಟಿ, ಜನಾರ್ಧನ ಬೊಂಡಾಲ, ದಯಾನಂದ ಬಿ.ಎಂ., ಪ್ರದೀಪ್ ಕುಮಾರ್ ಶೆಟ್ಟಿ ಅಡ್ಯಾರ್,ಪುರಸಭಾ ಸದಸ್ಯ ಗೋವಿಂದ ಪ್ರಭು, ಪುರಸಭೆಯ ಮಾಜಿ ಅಧ್ಯಕ್ಷ ದಿನೇಶ್ ಭಂಡಾರಿ, ಉದಯಕುಮಾರ್ ರಾವ್ ಬಂಟ್ವಾಳ ಮೊದಲಾದವರು ವೇದಿಕೆಯಲ್ಲಿದ್ದರು.