ಪದ್ಮಾವತ್ ಚಲನಚಿತ್ರ ಬಿಡುಗಡೆ: ನಾಲ್ಕು ರಾಜ್ಯಗಳಲ್ಲಿ ತೀವ್ರಗೊಂಡ ಪ್ರತಿಭಟನೆ, ಹಿಂಸಾಚಾರ

Update: 2018-01-26 05:51 GMT

ಹೊಸದಿಲ್ಲಿ, ಜ. 24: ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಅಸಮಾಧಾನಗೊಂಡಿರುವ ಕರ್ಣಿ ಸೇನೆ ‘ಪದ್ಮಾವತ್’ ಚಲನಚಿತ್ರ ಬಿಡುಗಡೆಗೆ ಒಂದು ದಿನ ಇರುವ ಮೊದಲೇ ತನ್ನ ಪ್ರತಿಭಟನೆ ತೀವ್ರಗೊಳಿಸಿದೆ.

ಆರಂಭದಲ್ಲಿ ‘ಪದ್ಮಾವತ್’ ಚಲನಚಿತ್ರವನ್ನು ನಿಷೇಧಿಸಲಾಗಿದ್ದ ಹರ್ಯಾಣ, ಗುಜರಾತ್, ರಾಜಸ್ಥಾನ, ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಹಾಗೂ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಅಂಗಡಿಮುಂಗಟ್ಟು ಮುಚ್ಚಲು ಯತ್ನಿಸಿದ ಹಾಗೂ ವಾಹನಗಳನ್ನು ಜಖಂಗೊಳಿಸಿದ ಪ್ರತಿಭಟನಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

ಹಲವು ವಾಹನಗಳ ಮಾಲಕರು ಗಾಯಗೊಂಡಿದ್ದಾರೆ. ದಿಲ್ಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯನ್ನು ಪ್ರತಿಭಟನಕಾರರು ಬಂದ್ ಮಾಡಿದ್ದಾರೆ. ‘ಪದ್ಮಾವತ್’ ಚಲನಚಿತ್ರ ಪ್ರದರ್ಶಿಸದಂತೆ ಪ್ರತಿಭಟನೆ ನಡೆಸಲು ಕರ್ಣಿ ಸೇನಾ ರಾಷ್ಟ್ರಾದ್ಯಂತದ ಇತರ ಸಾಮಾಜಿಕ ಸಂಘಟನೆಗಳಲ್ಲಿ ವಿನಂತಿಸಿದೆ.

ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ‘ಪದ್ಮಾವತ್’ ಪ್ರದರ್ಶನಕ್ಕೆ ವಿತರಕರು ನಿರಾಕರಿಸಿದ್ದಾರೆ. ಪ್ರತಿಭಟನಕಾರರು ಟಯರ್ ಉರಿಸಿದ ಪರಿಣಾಮ ದಿಲ್ಲಿ-ಅಜ್ಮೀರ್ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಹರ್ಯಾಣದ ಗುರ್ಗಾಂವ್‌ನಲ್ಲಿ ವಾಝಿಪುರ-ಪಟೌಡಿ ರಸ್ತೆಯನ್ನು ಪ್ರತಿಭಟನಕಾರರು ತಡೆದಿದ್ದಾರೆ. ಸೋಹ್ನಾದಲ್ಲಿ ಬಸ್‌ಗೆ ಬೆಂಕಿ ಹಚ್ಚಿದ್ದಾರೆ. ರವಿವಾರದ ವರೆಗೆ ಸಿನೆಮಾ ಮಂದಿರದ 200 ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನಕಾರರು ಪ್ರವೇಶಿಸದಂತೆ ಜಿಲ್ಲಾಡಳಿತ ನಿಷೇಧ ವಿಧಿಸಿದೆ. ಚಲನಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಹಲವು ಸಿನೆಮಾ ಮಂದಿರದ ಮಾಲಕರು ಹೇಳಿದ್ದಾರೆ.

ಲಕ್ನೋದಲ್ಲಿ ಮಾಲ್‌ನ ಹೊರಗೆ ಪ್ರತಿಭಟನಕಾರರು ಪ್ರತಿಭಟನೆ ನಡೆಸಿದರು. ತಾವು ಕರ್ಣಿ ಸೇನೆಗೆ ಸೇರಿದವರಲ್ಲ ಎಂದು ಹೇಳಿದ ಪ್ರತಿಭಟನಕಾರರು, ಸಿನೆಮಾ ಮಂದಿರದ ಮಾಲಕರು ನಮ್ಮ ಮನವಿಗೆ ಒಪ್ಪದೇ ಇದ್ದರೆ ಹಾಗೂ ಚಲನಚಿತ್ರ ಪ್ರದರ್ಶನ ಮುಂದುವರಿಸಿದರೆ, ನಾವು ಏನನ್ನು ಮಾಡಲೂ ಹಿಂಜರಿಯಲಾರೆವು ಎಂದಿದ್ದಾರೆ. ಮುಂಬೈಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕರ್ಣಿ ಸೇನೆಯ 30 ಮಂದಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗುಜರಾತ್ ರಾಜಧಾನಿಯಾದ ಅಹ್ಮದಾಬಾದ್‌ನಿಂದ 44 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗುಜರಾತ್‌ನಲ್ಲಿ ಹಲವು ಮಲ್ಟಿಫ್ಲೆಕ್ಸ್‌ಗಳಿಗೆ ನುಗ್ಗಿದ ಪ್ರತಿಭಟನೆಕಾರರು ದಾಂಧಲೆ ನಡೆಸಿದ್ದಾರೆ. ಹಿಂಸಾಚಾರಕ್ಕೆ ಸಂಬಂಧಿಸಿ ಬುಧವಾರ ಒಟ್ಟು 50 ಮಂದಿ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ.

ಅಹ್ಮದಾಬಾದ್‌ನಲ್ಲಿ ಗುಂಪೊಂದು 30ಕ್ಕೂ ಅಧಿಕ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದೆ ಹಾಗೂ ಅಂಗಡಿಗಳ ಕಿಟಕಿಗಳಿಗೆ ಹಾನಿ ಮಾಡಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಮಂಗಳವಾರ ಸಂಜೆಯಿಂದಲೇ ಪ್ರತಿಭಟನೆ ಆರಂಭವಾಗಿದೆ. ಮುಝಾಫರ್‌ನಗರದಲ್ಲಿ ಗುಂಪೊಂದು ದಾಂಧಲೆ ನಡೆಸಿದೆ. ಕಾನ್ಪುರದಲ್ಲಿ ಮಾಲ್ ಒಂದಕ್ಕೆ ನುಗ್ಗಿದ ಪ್ರತಿಭಟನಕಾರರು ಚಿತ್ರ ಪ್ರದರ್ಶಿಸಿದಂತೆ ಆಗ್ರಹಿಸಿದರು. ಚಿತ್ರದ ಪೋಸ್ಟರ್‌ಗಳನ್ನು ಹರಿದೆಸೆದ ಪ್ರತಿಭಟನಕಾರರು ಸೊತ್ತುಗಳನ್ನು ನಾಶ ಮಾಡಿದ್ದಾರೆ.

ದೃಶ್ಯಗಳಿಗೆ ಕತ್ತರಿ ಹಾಕಲು ಸಾಧ್ಯವಿಲ್ಲ

ಪದ್ಮಾವತ್ ಚಲನಚಿತ್ರದ ನಿರ್ದಿಷ್ಟ ದೃಶ್ಯಕ್ಕೆ ಕತ್ತರಿ ಹಾಕುವಂತೆ ಕೋರಿ ನ್ಯಾಯವಾದಿ ಮನೋಹರ್ ಲಾಲ್ ಶರ್ಮಾ ಸಲ್ಲಿಸಿರುವ ಮನವಿಯ ತುರ್ತು ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ಬುಧವಾರ ನಿರಾಕರಿಸಿದೆ. ಮನವಿಯನ್ನು ಸೋಮವಾರ ವಿಚಾರಣೆ ನಡೆಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ‘ಪದ್ಮಾವತ್’ ಬಗ್ಗೆ ನೀಡಿದ ತೀರ್ಪನ್ನು ಮಾರ್ಪಡಿಸಬೇಕು ಎಂದು ಮಂಗಳವಾರ ಸಲ್ಲಿಸಿದ ಮನವಿಯನ್ನು ಕೂಡ ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿತ್ತು.

ಕರ್ಣಿ ಸೇನೆಯ ವರಿಷ್ಠನ ಬಂಧನ

ಜೈಪುರ: ಪದ್ಮಾವತ್ ಬಿಡುಗಡೆಯ ವಿರುದ್ಧದ ಪ್ರತಿಭಟನೆಯಾಗಿ ಸಮುದಾಯದ 1,900 ಮಹಿಳೆಯರು ಸಾಮೂಹಿಕವಾಗಿ ಅಗ್ನಿಗೆ ಆಹುತಿಯಾಗಲು ಸಿದ್ಧರಿದ್ದಾರೆ ಎಂದು ಕರ್ಣಿ ಸೇನೆ ವಕ್ತಾರ ಹೇಳಿದ ಬಳಿಕ ಪೊಲೀಸರು ಶ್ರೀ ರಜಪೂತ್ ಕರ್ಣಿ ಸೇನೆಯ ಚಿತ್ತೋರ್‌ಗಢದ ರಿಷ್ಠರನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ 11 ಗಂಟೆಗೆ ಕರ್ಣಿ ಸೇನಾದ ಚಿತ್ತೋರ್‌ಗಢ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ಖಂಗಾರೋಟ್ ಹಾಗೂ ಉಪಾಧ್ಯಕ್ಷ ಕಮಲೇಂದು ಸಿಂಗ್ ಸೋಲಂಂಕಿ ಅವರ ಮನೆ ಪ್ರವೇಶಿಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇವರೊಂದಿಗೆ ಸಂಘಟನೆಯ ಸದಸ್ಯನಾಗಿರುವ ದೇವೇಂದ್ರ ಸಿಂಗ್‌ನನ್ನೂ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News