ಕೆಂಟಕಿ ಹೈಸ್ಕೂಲ್‌ನಲ್ಲಿ ವಿದ್ಯಾರ್ಥಿಯಿಂದ ಗುಂಡು ಹಾರಾಟ: 2 ಸಾವು
Update: 2018-01-24 23:02 IST
ವಾಶಿಂಗ್ಟನ್, ಜ. 24: ಅಮೆರಿಕದ ಕೆಂಟಕಿ ರಾಜ್ಯದ ಹೈಸ್ಕೂಲೊಂದರಲ್ಲಿ 15ವರ್ಷದ ವಿದ್ಯಾರ್ಥಿಯೊಬ್ಬ ಮಂಗಳವಾರ ಇಬ್ಬರು ಸಹಪಾಠಿಗಳನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಹಾಗೂ 10ಕ್ಕೂ ಅಧಿಕ ಮಂದಿಯನ್ನು ಗಾಯಗೊಳಿಸಿದ್ದಾನೆ.
ಹಂತಕ ವಿದ್ಯಾರ್ಥಿಯು ಗುಂಡುಗಳು ಮುಗಿಯುವವರೆಗೂ ಗುಂಡು ಹಾರಿಸುತ್ತಲೇ ಇದ್ದನು ಹಾಗೂ ಗುಂಡುಗಳು ಮುಗಿಯುತ್ತಲೇ ಓಡಿ ಹೋದನು ಎಂದು ಶಿಕ್ಷಕಿಯೊಬ್ಬರು ತಿಳಿಸಿದರು.
ಕೆಲವು ನಿಮಿಷಗಳ ಬಳಿಕ ಪೊಲೀಸರು ಶಂಕಿತ ವಿದ್ಯಾರ್ಥಿಯನ್ನು ಬಂಧಿಸಿ ಕರೆದೊಯ್ದರು.
17 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರ ಪೈಕಿ 12 ಮಂದಿಗೆ ಗುಂಡುಗಳು ತಗಲಿವೆ ಹಾಗೂ ಇತರ 5 ಮಂದಿ ನೂಕುನುಗ್ಗಾಟದಲ್ಲಿ ಗಾಯಗೊಂಡಿದ್ದಾರೆ.
ಗುಂಡು ಹಾರಾಟ ನಡೆಯುತ್ತಿದ್ದಾಗ ಮಾರ್ಶಲ್ ಕೌಂಟಿ ಹೈಸ್ಕೂಲ್‌ನ ನೂರಾರು ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಸಿಕ್ಕಸಿಕ್ಕಲ್ಲಿಗೆ ಓಡಿದರು.