ಸಯೀದ್ ಬಂಧಿಸದಂತೆ ಪಾಕ್ ಸರಕಾರಕ್ಕೆ ಲಾಹೋರ್ ಹೈಕೋರ್ಟ್ ತಡೆ

Update: 2018-01-24 17:36 GMT

ಲಾಹೋರ್, ಜ. 24: 2008ರ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರ ಹಫೀಝ್ ಸಯೀದ್‌ನನ್ನು ಮುಂದಿನ ಆದೇಶದವರೆಗೆ ಬಂಧಿಸದಂತೆ ಲಾಹೋರ್ ಹೈಕೋರ್ಟ್ ಬುಧವಾರ ಪಾಕಿಸ್ತಾನ ಸರಕಾರವನ್ನು ನಿರ್ಬಂಧಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ದಿಗ್ಬಂಧನ ನಿಗಾ ಸಮಿತಿಯ ಸದಸ್ಯರ ಭೇಟಿಗೆ ಮುನ್ನ ತನ್ನ ಬಂಧಿಸದಂತೆ ಹಾಗೂ ಜಮಾಅತುದಅವಾ (ಜೆಯುಡಿ) ಮತ್ತು ಫಲಾಹಿ ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್) ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಪಾಕಿಸ್ತಾನ ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಸಯೀದ್ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದನು.

ವಿಶ್ವಸಂಸ್ಥೆಯ ದಿಗ್ಬಂಧನೆ ನಿರ್ಣಯಗಳನ್ನು ಪಾಕಿಸ್ತಾನ ಹೇಗೆ ಜಾರಿಗೊಳಿಸುತ್ತಿದೆ ಎಂಬುದನ್ನು ಪರಿಶೀಲಿಸುವುದಕ್ಕಾಗಿ ತಂಡವು ಗುರುವಾರದಿಂದ ಇಸ್ಲಾಮಾಬಾದ್‌ಗೆ ಭೇಟಿ ನೀಡಲಿದೆ.

ಅಮೆರಿಕ ಮತ್ತು ಭಾರತದ ಆಣತಿಯಂತೆ ತನ್ನನ್ನು ಬಂಧಿಸಲು ಸರಕಾರ ಬಯಸುತ್ತಿದೆ ಎಂದು ತನ್ನ ಅರ್ಜಿಯಲ್ಲಿ ಸಯೀದ್ ಹೇಳಿದ್ದನು. ತಾನು ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದೇನೆ ಎಂಬುದನ್ನು ಸಾಬೀತುಪಡಿಸಲು ಈ ದೇಶಗಳ ಲಾಬಿ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದೆ ಎಂದು  ಹೇಳಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News