‘ಪದ್ಮಾವತ್’ ಹಿಂಸಾಚಾರದ ನೈತಿಕ ಹೊಣೆ ಪ್ರಧಾನಿ ಹೊರಬೇಕು: ಕಾಂಗ್ರೆಸ್

Update: 2018-01-25 14:42 GMT

ಹೊಸದಿಲ್ಲಿ, ಜ.25: ಹಿಂದಿ ಸಿನೆಮ ‘ಪದ್ಮಾವತ್’ ವಿರೋಧಿಸಿ ಪ್ರತಿಭಟನೆ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಹಾಗೂ ಇದರ ನೈತಿಕ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

  ಹರ್ಯಾಣದಲ್ಲಿ ಪ್ರತಿಭಟನಾಕಾರರು ಶಾಲಾ ಬಸ್‌ನ ಮೇಲೆ ಆಕ್ರಮಣ ನಡೆಸಿದ ಘಟನೆ ವಿಷಾದಕರ ಹಾಗೂ ಅವಮಾನಕರ ಎಂದ ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ, ಈ ಘಟನೆ ಮೋದಿ ಹಾಗೂ ಹರ್ಯಾಣ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡಲು ವಿಫಲವಾಗಿರುವುದರ ದ್ಯೋತಕವಾಗಿದೆ ಎಂದರು.

ಘಟನೆಯ ಕುರಿತು ಸೊಲ್ಲೆತ್ತದಿರುವ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವೆ ಸ್ಮೃತಿ ಇರಾನಿಯನ್ನೂ ಟೀಕಿಸಿದ ಪ್ರಿಯಾಂಕಾ, ದಿನದ 24 ಗಂಟೆಯೂ ತಾನೇನು ಮಾಡಿದೆ, ಮೋದಿ ಸರಕಾರ ಏನು ಮಾಡಿದೆ, ತಾನು ಎಲ್ಲಿಗೆಲ್ಲಾ ಹೋದೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಟ್ವೀಟ್ ಮಾಡುವ ಸ್ಮೃತಿಗೆ ಈಗೇಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.

 ಸ್ಮೃತಿ ಇರಾನಿ ನೇತೃತ್ವದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಅಧೀನದಲ್ಲಿರುವ ಸೆನ್ಸಾರ್ ಮಂಡಳಿ ‘ಪದ್ಮಾವತ್’ಗೆ ಪ್ರಮಾಣಪತ್ರ ನೀಡಿ ಸಿನೆಮ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿದೆ. ಬಿಜೆಪಿಯು ಕೇಂದ್ರ ಹಾಗೂ ರಾಜ್ಯಗಳೆರಡರಲ್ಲೂ ವಿಫಲವಾಗಿರುವುದನ್ನು ಇದು ತೋರಿಸುತ್ತದೆ. ಪ್ರಧಾನಿ ಅಥವಾ ಯಾವುದೇ ಸಚಿವರೂ ಈ ಬಗ್ಗೆ ತುಟಿಬಿಚ್ಚದಿರುವುದು ಖಂಡನಾರ್ಹವಾಗಿದೆ. ಕಾನೂನು ಸುವ್ಯವಸ್ಥೆಯ ಪರಿಪಾಲನೆ ಯಾರ ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.

ಸರಕಾರ ಸುಪ್ರೀಂಕೋರ್ಟ್‌ನ ಆದೇಶದ ಬಗ್ಗೆ ನಿರ್ಲಕ್ಷ ತೋರಿದೆ ಮತ್ತು ಹಿಂಸಾಚಾರ ನಿಯಂತ್ರಿಸಲು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದ ಅವರು, ಹರ್ಯಾಣವು ‘ಸಾಮೂಹಿಕ ಅತ್ಯಾಚಾರದ ರಾಜಧಾನಿ’ಯಾಗುತ್ತಿದ್ದು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News