ಐಎಎಫ್ ಕಮಾಂಡೊ ಜ್ಯೋತಿ ಪ್ರಕಾಶ್ ನಿರಾಲಾರಿಗೆ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ

Update: 2018-01-25 15:08 GMT

ಹೊಸದಿಲ್ಲಿ, ಜ.25: ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಸಂದರ್ಭ ಒಬ್ಬಂಟಿಯಾಗಿ ಆರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ವಾಯು ಪಡೆಯ ಗರುಡ ಕಮಾಂಡೊ ಜ್ಯೋತಿ ಪ್ರಕಾಶ್ ನಿರಾಲಾ ಅವರಿಗೆ ಶುಕ್ರವಾರ ನಡೆಯುವ 69ನೇ ಗಣರಾಜ್ಯೋತ್ಸವದಲ್ಲಿ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಳೆದ ವರ್ಷ ನವೆಂಬರ್ 18ರಂದು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದ ಗ್ರಾಮವಾದ ಚಂದೇರ್‌ಗೀರ್‌ನಲ್ಲಿ ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಆರು ಭಯೋತ್ಪಾದಕರು ಹತರಾಗಿದ್ದರು.

ಹತರಾಗಿದ್ದ ಮೂವರಲ್ಲಿ ಓರ್ವ ಭಯೋತ್ಪಾದಕ ಲಷ್ಕರೆ ತಯ್ಯಿಬದ ವರಿಷ್ಠ ಹಾಗೂ 26/11 ಮುಂಬೈ ದಾಳಿಯ ರೂವಾರಿ ಝಕಿವುರ್ರಹ್ಮಾನ್ ಲಖ್ವಿಯ ಸೋದರಳಿಯನಾಗಿದ್ದ. ಜ್ಯೋತಿ ಪ್ರಕಾಶ್ ನಿರಾಲಾ ಲಘು ಮೆಷಿನ್ ಗನ್‌ನೊಂದಿಗೆ ತನ್ನ ಪ್ರಾಣ ಒತ್ತೆ ಇಟ್ಟು ಕಾರ್ಯಾಚರಣೆ ನಡೆಸಿದ್ದರು. ಈ ಸಂದರ್ಭ ಅವರು ಗುಂಡಿನ ದಾಳಿಗೆ ಒಳಗಾಗಿ ಮೃತಪಟ್ಟರೂ ಲಷ್ಕರೆ ತಯ್ಯಿಬದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರು. ಮರಣೋತ್ತರವಾಗಿ ಅಶೋಕ ಚಕ್ರ ಪ್ರಶಸ್ತಿ ಪಡೆಯುತ್ತಿರುವ ಭಾರತೀಯ ವಾಯು ಪಡೆಯ ಮೊದಲ ಕಮಾಂಡರ್ ಜ್ಯೋತಿ ಪ್ರಕಾಶ್ ನಿರಾಲಾ.

 ಅಸಾಧರಣ ಶೌರ್ಯ ಹಾಗೂ ದೇಶಕ್ಕೆ ನೀಡಿದ ಸೇವೆಗಾಗಿ ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೀಡುತ್ತಿರುವ ಭಾರತದ ಅತ್ಯುಚ್ಚ ಶಾಂತಿ ಸಮಯದ ಸೇನಾ ಪ್ರಶಸ್ತಿ ಅಶೋಕ ಚಕ್ರ. ಗಣರಾಜ್ಯೋತ್ಸವದ ದಿನ ಜ್ಯೋತಿ ಪ್ರಕಾಶ್ ನಿರಾಲಾರ ಪರವಾಗಿ ಅವರ ಕುಟುಂಬ ಪ್ರಶಸ್ತಿ ಸ್ವೀಕರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News