ಬಾಲ್ಯ ವಿವಾಹ ಅಭಿವೃದ್ಧಿಗೆ ಮಾರಕ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಜ.25: ಬಾಲ್ಯ ವಿವಾಹವು ಅಭಿವೃದ್ಧಿಗೆ ಮಾರಕವಾದ ಸಮಸ್ಯೆ ಯಾಗಿದ್ದು, ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನೆಯ ವೇಳೆ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಚರ್ಚೆ ನಡೆಯಿತು. ಬಾಲ್ಯವಿವಾಹ ನಿಷೇಧವನ್ನು ಅನುಷ್ಠಾನಕ್ಕೆ ತರುವುದು ಎಲ್ಲಾ ಅಧಿಕಾರಿಗಳ ಹಾಗೂ ಸಮಾಜ ದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ನುಡಿದರು.
21 ವರ್ಷದೊಳಗಿನ ಯುವಕ ಹಾಗೂ 18 ವರ್ಷದೊಳಗಿನ ಯುವತಿ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿ ನೊಳಗಿದ್ದರೂ ಇಂತಹ ವಿವಾಹವನ್ನು ಬಾಲ್ಯ ವಿವಾಹವೆಂದು ಪರಿಗಣಿಸಲಾ ಗುತ್ತದೆ.
ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ಯಾವುದೇ ಬಾಲ್ಯ ವಿವಾಹವನ್ನು ನೆರವೇರಿಸುವ, ನಡೆಸುವ ಹಾಗೂ ಪ್ರೇರೇಪಿಸುವ ವ್ಯಕ್ತಿಯ ತಂದೆ ತಾಯಿಯಾಗಲಿ, ಪೋಷಕರಾಗಲಿ ಅಥವಾ ಮಗುವಿನ ಹೊಣೆ ಹೊಂದಿರುವ ಯಾವುದೇ ಸಂಸ್ಥೆ ಅಥವಾ ಸಂಘಟನೆ ಯಾಗಲಿ, ಬಾಲ್ಯ ವಿವಾಹದಲ್ಲಿ ಭಾಗವಹಿಸುವುದು ಸೇರಿದಂತೆ ವಿವಾರ ನೆರವೇರುವುದನ್ನು ತಡೆಯಲು ನಿರ್ಲಕ್ಷ ತೋರಿದರೆ ಒಂದು ವರ್ಷಕ್ಕೆ ಕಡಿಮೆ ಯಿಲ್ಲದ ಆದರೆ 2 ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಜೈಲುವಾಸ ಅಥವಾ ಒಂದು ಲಕ್ಷ ರೂ.ವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಅಥವಾ ಇವೆರೆಡೂ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.
ಜಿಲ್ಲೆಯ ಎಲ್ಲಾ ಧಾರ್ಮಿಕ ಮುಖಂಡರುಗಳು, ಸಾಮೂಹಿಕ ವಿವಾಹ ಆಯೋಜಕರು, ಕಲ್ಯಾಣ ಮಂಟಪದ ವ್ಯವಸ್ಥಾಪಕರು ತಮ್ಮ ವ್ಯಾಪ್ತಿಯಲ್ಲಿ ಆಯೋಜನೆಗೊಳ್ಳುವ ವಿವಾಹದ ವಧು-ವರರು ಪ್ರಾಪ್ತ ವಯಸ್ಕರಾಗಿರುವ ಬಗ್ಗೆ ಜನನ ಪ್ರಮಾಣ ಪತ್ರ, ಶಾಲಾ ವಯಸ್ಸಿನ ದೃಢೀಕರಣ ಪತ್ರ ಅಥವಾ ಸರಕಾರಿ ವೈದ್ಯರು ರೇಡಿಯೋಲಜಿ ಪರೀಕ್ಷೆ ನಡೆಸಿ ನೀಡಿದ ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ ದಾಖಲೆಗಳನ್ನು ಖಚಿತ ಪಡಿಸಿಕೊಂಡು ವಿವಾಹ ಆಯೋಜಿಸತಕ್ಕದ್ದು ಹಾಗೂ ಕಡ್ಡಾಯವಾಗಿ ಮದುವೆಗಳಿಗೆ ಅವಕಾಶ ಮಾಡಿಕೊಡುವ ದೇವಸ್ಥಾನ/ಮಠ/ಚರ್ಚ್/ಮಸೀದಿ/ ಕಲ್ಯಾಣ ಮಂಟಪ/ ಪಂಕ್ಷನ್ ಹಾಲ್‌ಗಳಲ್ಲಿ ಫಲಕಗಳನ್ನು ಹಾಕಲು ಹಾಗೂ ಜಿಲ್ಲೆಯಲ್ಲಿ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.