ಸಾಲಿಗ್ರಾಮ ಮಕ್ಕಳ ಯಕ್ಷಗಾನ ಮೇಳಕ್ಕೆ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ
Update: 2018-01-25 22:03 IST
ಉಡುಪಿ, ಜ.25: ಅಂಬಲಪಾಡಿಯ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾಗಿದ್ದ ನಿ.ಬೀ. ಅಣ್ಣಾಜಿ ಬಲ್ಲಾಳ ಹೆಸರಿನಲ್ಲಿ ಅಂಬಲ ಪಾಡಿಯ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಸ್ಥಾಪಿಸಿದ ‘ನಿಡಂಬೂರು ಬೀಡು ಬಲ್ಲಾಳೞಪ್ರಶಸ್ತಿ’ಗೆ ಈ ಬಾರಿ ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಾಲಿಗ್ರಾಮ ಮಕ್ಕಳ ಮೇಳ ಆಯ್ಕೆಯಾಗಿದೆ.
ಕಳೆದ 43 ವರ್ಷಗಳಿಂದ ಸಾಲಿಗ್ರಾಮ ಮಕ್ಕಳ ಮೇಳವು ಮಕ್ಕಳಿಗೆ ಯಕ್ಷಗಾನ ಕಲಿಸಿ ಪ್ರದರ್ಶನ ಏರ್ಪಡಿಸುತ್ತಾ ದೇಶ ವಿದೇಶಗಳಲ್ಲಿ ಖ್ಯಾತಿ ಗಳಿಸಿದೆ. ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿಯ 60ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಫೆ.10ರಂದು ನಡೆಯುವ ಸಭಾ ಕಾರ್ಯಕ್ರಮ ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಕಾರ್ಯದರ್ಶಿ ಕೆ.ಜೆ.ಕೃಷ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.