ಉಳ್ಳಾಲದಲ್ಲಿ ಹಮೀದ್ ಕಂದಕ್ ಅಂತ್ಯಕ್ರಿಯೆ
ಮಂಗಳೂರು, ಜ. 25: ಹಿರಿಯ ಸಾಮಾಜಿಕ ಧುರೀಣ ಹಾಜಿ ಹಮೀದ್ ಕಂದಕ್ (68) ಅವರ ಅಂತ್ಯ ಕ್ರಿಯೆಯು ಗುರುವಾರ ಅಸರ್ ನಮಾಝಿನ ಬಳಿಕ ಉಳ್ಳಾಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನೆರವೇರಿತು.
ಬುಧವಾರ ನಿಧನರಾಗಿದ್ದ ಅವರ ಪಾರ್ಥಿವ ಶರೀರವನ್ನು ನಗರದ ಗೋರಿಗುಡ್ಡದ ಅವರ ನಿವಾಸದಲ್ಲಿರಿಸಲಾಗಿತ್ತು. ಸೌದಿ ಅರೇಬಿಯಾದಲ್ಲಿದ್ದ ಅವರ ಇಬ್ಬರು ಪುತ್ರರು ಹಾಗೂ ಅವರ ಮಗಳ ಗಂಡನ ಆಗಮನಕ್ಕಾಗಿ ಕಾಯಲಾಗಿತ್ತು. ಇವರು ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ಆಗಮಿಸಿದ್ದರು. ಅವರ ಅಂತಿಮ ದರ್ಶನ ಪಡೆದ ಬಳಿಕ ಮೃತ ಶರೀರವನ್ನು ಗೋರಿಗುಡ್ಡೆಯಯ ಅವರ ನಿವಾಸದಿಂದ ಆ್ಯಂಬುಲೆನ್ಸ್ ಮೂಲಕ ಉಳ್ಳಾಲಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸಚಿವರಾದ ಯು.ಟಿ.ಖಾದರ್, ವಿನಯಕುಮಾರ್ ಸೊರಕೆ, ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜಾ, ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಸುರೇಶ್ ಬಳ್ಳಾಲ್, ಶಶಿಧರ್ ಹೆಗ್ಡೆ, ಮುಹಮ್ಮದ್ ಮಸೂದ್, ಕೆಸಿಐಸಿ ಗ್ರೂಪ್‌ನ ಅಧ್ಯಕ್ಷ ಐ.ಎ.ಸಿದ್ದೀಕಿ, ಮಾಂಡವಿ ಮೋಟರ್ಸ್‌ನ ಕಿಶೋರ್ ರಾವ್, ಮಾಜಿ ಮೇಯರ್ ಕೆ.ಅಶ್ರಫ್ ಮೊದಲಾವದರು ಮೃತರ ಅಂತಿಮ ದರ್ಶನ ಪಡೆದರು.