ರಾಯಭಾರ ಕಚೇರಿ ವಾಸದಿಂದ ಅಸಾಂಜ್ ಆರೋಗ್ಯಕ್ಕೆ ಅಪಾಯ: ವೈದ್ಯರ ವರದಿ

Update: 2018-01-25 17:05 GMT

ಲಂಡನ್, ಜ. 25: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಲಂಡನ್‌ನ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ವಾಸ್ತವ್ಯ ಮುಂದುವರಿಸುವುದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

 ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇಬ್ಬರು ವೈದ್ಯರು ಮೂರು ದಿನಗಳ ಅವಧಿಯಲ್ಲಿ 20 ಗಂಟೆಗಳ ಕಾಲ ಅಸಾಂಜ್‌ರ ಸಮಗ್ರ ದೈಹಿಕ ಮತ್ತು ಮಾನಸಿಕ ಆರೋಗ್ಯ ವಿಶ್ಲೇಷಣೆ ನಡೆಸಿದ ಬಳಿಕ ಈ ವರದಿ ನೀಡಿದ್ದಾರೆ ಎಂದು ‘ದ ಗಾರ್ಡಿಯನ್’ ಬುಧವಾರ ವರದಿ ಮಾಡಿದೆ.

 ‘‘ಈ ಆರೋಗ್ಯ ವಿಶ್ಲೇಷಣೆಯ ಫಲಿತಾಂಶವನ್ನು ವೈದ್ಯ-ರೋಗಿ ಗೌಪ್ಯತೆಯಡಿ ತಡೆಹಿಡಿಯಲಾಗಿದೆ. ಆದರೆ, ಅವರು ಇನ್ನೂ ಬಂಧನದಲ್ಲಿ ಮುಂದುವರಿಯುವುದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದು ನಮ್ಮ ವೃತ್ತಿಪರ ಅಭಿಪ್ರಾಯವಾಗಿದೆ’’ ಎಂದು ವೈದ್ಯೆ ಸೊಂಡ್ರಾ ಕ್ರಾಸ್ಬಿ ಮತ್ತು ವೈದ್ಯ ಬ್ರಾಕ್ ಚಿಶೊಲ್ಮ್ ಪತ್ರಿಕೆಯಲ್ಲಿ ಬರೆದಿದ್ದಾರೆ.

ಸ್ವೀಡನ್‌ನಲ್ಲಿ ಅತ್ಯಾಚಾರ ಮತ್ತು ಲೈಂಗಿಕ ಹಲ್ಲೆ ಆರೋಪಗಳನ್ನು ಎದುರಿಸುತ್ತಿರುವ ಅಸಾಂಜ್, ಆ ದೇಶಕ್ಕೆ ಗಡಿಪಾರಾಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 2012ರಲ್ಲಿ ಲಂಡನ್‌ನಲ್ಲಿರುವ ಇಕ್ವೆಡಾರ್ ರಾಯಭಾರ ಕಚೇರಿಯನ್ನು ಪ್ರವೇಶಿಸಿದ್ದಾರೆ ಹಾಗೂ ಆರು ವರ್ಷಗಳಿಂದಲೂ ಅಲ್ಲೇ ವಾಸಿಸುತ್ತಿದ್ದಾರೆ.

ವಿಯೆನ್ನಾ ಒಡಂಬಡಿಕೆಯ ಅನ್ವಯ, ಪೊಲೀಸರು ತಮ್ಮ ದೇಶದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳ ಒಳಗೆ ಪ್ರವೇಶಿಸಿ ಯಾರನ್ನೂ ಬಂಧಿಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News