ಯೋಗ್ಯರನ್ನು ಚುನಾಯಿಸಿ: ನ್ಯಾಕೆ.ಎಸ್.ಬೀಳಗಿ ಕರೆ
ಮಂಗಳೂರು, ಜ.25: ಹಿರಿಯರು ಮಾಡಿದ ತಪ್ಪುಗಳನ್ನು ಪುನರಾವರ್ತನೆ ಮಾಡದೆ ಯುವ ಜನಾಂಗವು ದೇಶ ಕಟ್ಟಲು ಸಮರ್ಥವಿರುವ ಯೋಗ್ಯರನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ಬೀಳಗಿ ಕರೆ ನೀಡಿದರು.ದ.ಕ.ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಪುರಭವನದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನದಾನ, ವಿದ್ಯಾದಾನದಂತೆ ಮತದಾನವೂ ಶ್ರೇಷ್ಠವಾಗಿದೆ. ಮತದಾರರು ಸಮರ್ಥರನ್ನು ಆಯ್ಕೆ ಮಾಡಿದರೆ ದೇಶ-ರಾಜ್ಯವನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಿದೆ. ಆಯೋಗ್ಯರಿಗೆ ಮತವನ್ನು ದಾನ ಮಾಡಿ ಹಾಳು ಮಾಡುವ ಬದಲು ಯೋಗ್ಯವನ್ನು ಆಯ್ಕೆ ಮಾಡುವ ಅಗತ್ಯವಿದೆ ಎಂದು ನ್ಯಾ.ಕೆ.ಎಸ್.ಬೀಳಗಿ ಹೇಳಿದರು.
ಮತದಾನಕ್ಕೆ ಮುನ್ನ ಅಭ್ಯರ್ಥಿ ಚಾರಿತ್ರ ಮತ್ತು ಪಕ್ಷದ ಹಿನ್ನೆಲೆ ಅರಿತುಕೊಳ್ಳಬೇಕು. ಹಣದ ಆಮಿಷಕ್ಕೆ ಬಲಿಯಾಗಬಾರದು. ಧರ್ಮ-ಜಾತಿಯನ್ನು ಬದಿಗೊತ್ತಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ನ್ಯಾ. ಕೆ.ಎಸ್. ಬೀಳಗಿ ಮತದಾನ ಪ್ರಕ್ರಿಯೆಯಿಂದ ದೂರ ಸರಿಯದೆ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕಿದೆ ಎಂದರು.
ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ದ.ಕ.ಜಿಪಂ ಸಿಇಒ ಡಾ.ಎಂ.ಆರ್.ರವಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನ ಗೌಡ, ರಥಬೀದಿ ಸರಕಾರಿ ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ವಂದಿಸಿದರು.