×
Ad

ಮಂಗಳೂರು: ಅಂಗನವಾಡಿ ನೌಕರರಿಂದ ಪ್ರತಿಭಟನೆ

Update: 2018-01-25 22:59 IST

ಮಂಗಳೂರು, ಜ.25: ವೇತನ ನೀಡದೆ ದುಡಿಸುವ ಅಧಿಕಾರಿ ವರ್ಗದ ನೀತಿಯನ್ನು ಖಂಡಿಸಿ ಸಿಐಟಿಯು ನೇತೃತ್ವದ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಜಿಪಂ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿ ವೇತನ ನೀಡದೆ ದುಡಿಸುವುದು ಅಪರಾಧ. ಅಕ್ಟೋಬರ್, ನವಂಬರ್, ಡಿಸೆಂಬರ್‌ನ ವೇತನವನ್ನು ಬಂಟ್ವಾಳ ತಾಲೂಕಿನ ಅಂಗನವಾಡಿ ನೌಕರರಿಗೆ ನೀಡದಿರುವ ಅಧಿಕಾರಿಗಳ ಬೇಜವಾಬ್ದಾರಿತನ ಖಂಡನೀಯ. ಮಾಸಿಕ ವೇತನದಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿರುವ ಅಂಗನವಾಡಿ ನೌಕರರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದರು.

ಸಿಐಟಿಯು ನಾಯಕರಾದ ವಸಂತ ಆಚಾರಿ, ರಾಮಣ್ಣ ವಿಟ್ಲ, ಅಶೋಕ ಶ್ರೀಯಾನ್ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷೆ ರವಿಕಲಾ, ಲಕ್ಮೀ ಭಟ್, ಸಾವಿತ್ರಿ, ಮೂಕಾಂಬಿಕ, ಲಿಡಿಯಾ, ವಸಂತಿ ವಿಟ್ಲ, ರೇವತಿ ಪೆರುವಾಯಿ, ಲಲಿತ ಮಾಣಿ, ಆಶಾ ಅಡಿಕೆಮಜಲು, ಭವಾನಿ ಇಡ್ಕಿದು, ಶಕುಂತಳಾ ದೈವಸ್ಥಳ, ಸುಜಾತಾ ಗಾಡಿಪಲ್ಕೆ ಪಾಲ್ಗೊಂಡಿದ್ದರು.

ಜ.30ರೊಳಗಡೆ ವೇತನ ಪಾವತಿಸದಿದ್ದರೆ ಉಸ್ತುವಾರಿ ಸಚಿವ ಬಿ.ರಮಾನಾಥ ರೈಯ ಮನೆಯ ಮುಂದೆ ಕುಟುಂಬ ಸಮೇತರಾಗಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಮತ್ತು ಜಿಪಂ ಸಿಇಒ ಮತ್ತು ಅಂಗನವಾಡಿ ಉಪ ನಿರ್ದೇಶಕರಿಗೆ ಮನವಿ ನೀಡಿ ವೇತನ ಪಾವತಿ ಆಗದಿದ್ದರೆ ಪಲ್ಸ್ ಪೋಲಿಯೋ ಕೆಲಸವನ್ನು ಸ್ಥಗಿತಗೊಳಿಸುವುದು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News